ಕುಶಾಲನಗರ, ಆ. ೩: ಕಳೆದ ಒಂದು ವಾರ ಕಾಲ ಉಕ್ಕಿ ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಹುತೇಕ ಇಳಿಮುಖಗೊಂಡಿದೆ.

ಅಪಾಯದ ಅಂಚು ಮೀರಿ ಹರಿಯುತ್ತಿದ್ದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣ ನದಿಯ ನೀರಿನ ಹರಿವಿನಲ್ಲಿ ಇಳಿಕೆ ಕಂಡು ಬಂದಿದೆ.

ಇದೇ ಸಂದರ್ಭ ಹಾರಂಗಿ ಅಣೆಕಟ್ಟಿನಿಂದ ನಿರಂತರವಾಗಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಆಗಸ್ಟ್ ಮೂರನೇ ವಾರದ ತನಕ ಪ್ರವಾಹದ ಭೀತಿ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನಿರಂತರವಾಗಿ ನದಿಗೆ ಹರಿಸುವಂತೆ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಅಣೆಕಟ್ಟು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಜಲಾಶಯದ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ನದಿಗೆ ಬಿಡುವುದಾಗಿ ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.