ಸುಂಟಿಕೊಪ್ಪ, ಆ. ೩: ನೀರುಗಂಟಿ ಹಾಗೂ ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ ೭ನೇ ಹೊಸಕೋಟೆ ಅಂದಗೋವೆ ಪೈಸಾರಿಯ ನಿವಾಸಿ ನೀರು ಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಸೈನ್ ಎಂಬವರ ಮೇಲೆ ಕಾಡಾನೆಯೊಂದು ತೋಟದೊಳಗಿನಿಂದ ಇಂದು ಬೆಳಿಗ್ಗೆ ೬ ಗಂಟೆ ವೇಳೆಗೆ ದಾಳಿ ಮಾಡಿ ಸೊಂಡಿಲಿನಿAದ ರಸ್ತೆ ಬದಿಯಲ್ಲಿದ್ದ ಸಿಮೆಂಟ್ ರಿಂಗ್‌ನ ಒಳಕ್ಕೆ ದೂಡಿದೆ. ರಿಂಗ್ ಒಳಗೆ ಸೇರಿಕೊಂಡ ಹುಸೈನ್ ಅಲ್ಲಿಯೇ ಅವಿತುಕೊಂಡು ಜೀವ ಉಳಿಸಿಕೊಂಡಿದ್ದಾರೆ. ರಿಂಗ್ ಒಳಗಿದ್ದ ಹುಸೈನ್ ಹೊರ ಬಾರದ್ದರಿಂದ ರೋಷಗೊಂಡ ಕಾಡಾನೆ ಸಿಮೆಂಟ್ ರಿಂಗ್‌ನ್ನು ಒಡೆಯಲು ಕೋರೆಯಿಂದ ತಿವಿದು ಅಲ್ಲಿಂದ ಕಾಲ್ಕಿತ್ತಿದೆ. ನಂತರ ಸ್ಥಳೀಯರು ಗಾಯಗೊಂಡ ಹುಸೈನ್ ಅವರನ್ನು ಮಡಿಕೇರಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಮಹಿಳೆ ಮೇಲೆ ದಾಳಿ : ಮತ್ತೊಂದು ಘಟನೆಯಲ್ಲಿ ಸುಂಟಿಕೊಪ್ಪ ವ್ಯಾಪ್ತಿಯ ಕಂಬಿಬಾಣೆ ಪಂಚಾಯಿತಿಯ ಅತ್ತೂರು ನಲ್ಲೂರು ತೋಟದಲ್ಲಿ ಕೆಲಸಕ್ಕೆ ತಯಾರಾಗಿ ನಿಂತಿದ್ದ ಕಾರ್ಮಿಕರ ಗುಂಪಿನ ನಡುವೆ ನುಗ್ಗಿದ ಕಾಡಾನೆ ಮಹದೇವಮ್ಮ ಎಂಬ ಮಹಿಳೆಯನ್ನು ಸೊಂಡಿಲಿನಿAದ ಎತ್ತಿ ಕಾಫಿ ಗಿಡದ ಮೇಲೆ ಎಸೆದಿದೆ. ಪರಿಣಾಮ ಮಹಿಳೆಯ ತೊಡೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ, ಕೊಡಗರಹಳ್ಳಿ. ಅತ್ತೂರು ನಲ್ಲೂರು, ಹೊರೂರು, ಅಂದಗೋವೆ, ಶಾಂತಿಗೇರಿ, ಎಮ್ಮೆಗುಂಡಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆ ಉಪಟಳದಿಂದ ಬೆಳೆಗಾರರು, ಕೂಲಿ ಕಾರ್ಮಿಕರು ರೋಸಿ ಹೋಗಿದ್ದಾರೆ.