ಮಡಿಕೇರಿ, ಆ. ೩: ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸೇರಿದಂತೆ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಿರುವದು ಅಸಂವಿಧಾನಿಕ ಎಂದು ಹೇಳಿರುವ ಸಂಘದ ಪ್ರಮುಖರು; ರಾಜ್ಯ ಸಂಘದ ಈ ನಡೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ; ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ನೇತೃತ್ವದ ತಂಡದ ಹೋರಾಟದ ಫಲವಾಗಿ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಮೊತ್ತ ಹೆಚ್ಚಿಗೆ ಸಿಗುವಂತಾಗಿದೆ. ವನ್ಯಜೀವಿ ಹಾವಳಿಯಿಂದ ನಷ್ಟಕ್ಕೊಳಗಾದವರಿಗೆ, ದಾಳಿಯಿಂದ ಮೃತಪಟ್ಟವರಿಗೂ ಪರಿಹಾರ ಮೊತ್ತವನ್ನು ಹೆಚ್ಚಳ ಮಾಡುವಲ್ಲಿ ಸಫಲವಾಗಿದೆ. ರೈತರ ಆತ್ಮಹತ್ಯೆ ತಡೆಗಟ್ಟುವಲ್ಲಿ ರೈತ ಸಂಘದ ಹೋರಾಟ ಪ್ರಮುಖ ಪಾತ್ರ ವಹಿಸಿದೆ. ಕಾಫಿ ಬೆಳೆಗಾರರಿಗೂ ಪರಿಹಾರ ಮೊತ್ತ ಹೆಚ್ಚಿಸುವಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಫಲಸಿಕ್ಕಿದೆ. ರೈತರ, ಬಡವರ ಪರ ಹೋರಾಟ ಮಾಡಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸೋಮಯ್ಯ ಅವರ ಏಳಿಗೆಯನ್ನು ಸಹಿಸಲಾಗದೆ ರಾಜ್ಯ ಸಂಘದವರು ಪದಚ್ಯುತಿಗೊಳಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ಆಯ್ಕೆಯಾಗಿ ಬಂದಿರುವ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ಪದಚ್ಯುತಿಗೊಳಿಸಲು ರಾಜ್ಯ ಸಂಘಕ್ಕೆ ಯಾವದೇ ಅಧಿಕಾರವಿಲ್ಲ. ಹಾಗಾಗಿ ಜಿಲ್ಲೆಯ ಐದು ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆ ಸೇರಿ ಒಮ್ಮತದ ತೀರ್ಮಾನ ಕೈಗೊಂಡು ಮನು ಸೊಮಯ್ಯ ಅವರ ನೇತೃತ್ವದಲ್ಲಿಯೇ ಸಂಘವನ್ನು ಮುನ್ನಡೆಸಿಕೊಂಡು ಹೋಗುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆ ಸಂದರ್ಭ ‘ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳನ್ನು ಸೋಲಿಸಿ’ ಎಂಬ ಕರಪತ್ರಗಳನ್ನು ಹಂಚುವAತೆ ರಾಜ್ಯ ಸಂಘದ ಬಡಗಲಪುರ ನಾಗೇಂದ್ರ ಮುಂದಾಳತ್ವದಲ್ಲಿ ಸೂಚನೆ ನೀಡಲಾಗಿತ್ತು. ರೈತ ಸಂಘ ರಾಜಕೀಯ ರಹಿತ ಸಂಘಟನೆಯಾಗಿದ್ದು, ರಾಜ್ಯ ಸರಕಾರದ ಸೂಚನೆಯನ್ನು ತಿರಸ್ಕರಿಸಿದ ಕಾರಣ ಈ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಜಿಲ್ಲಾ ಸಂಘ ಲೆಕ್ಕ ಪತ್ರವನ್ನು ಕ್ರಮಬದ್ಧವಾಗಿರಿಸಿಕೊಂಡಿದೆ. ರಾಜ್ಯ ಸಂಘ ಲೆಕ್ಕಪತ್ರ ಕೂಡ ಮಂಡಿಸಿಲ್ಲ ಈ ಬಗ್ಗೆ ಕೇಳಿದ್ದೂ ಕೂಡ ರಾಜ್ಯ ಸಂಘದವರಿಗೆ ಇರಿಸುಮುರಿಸಾಗಿ ಪದಚ್ಯುತಿಗೊಳಿಸಲಾಗಿದೆ, ಇದು ಖಂಡನೀಯವೆAದು ಹೇಳಿದರು.

ಸಂಘದ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ; ರಾಜ್ಯ ಸಂಘದ ನಿರ್ಧಾರ ಹಾಸ್ಯಾಸ್ಪದವಾದುದು. ಕೊಡಗು ಜಿಲ್ಲಾ ಸಂಘದ ಏಳಿಗೆಯನ್ನು ಸಹಿಸಲಾಗದೆ ಇಂತಹ ನಿರ್ಧಾರ ಕೈಗೊಂಡಿದೆ. ವಾಸ್ತವವಾಗಿ ರಾಜ್ಯ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಇನ್ನಿಬ್ಬರು ಪದಾಧಿಕಾರಿಗಳ ಅಧಿಕಾರಾವಧಿ ಮಾರ್ಚ್ ತಿಂಗಳಿಗೆ ಮುಕ್ತಾಯಗೊಂಡಿದೆ. ಆದರೂ ಅಧಿಕಾರ ಬಿಟ್ಟುಕೊಟ್ಟಿಲ್ಲ. ಕೊಡಗು ಸಂಘದ ಅಧ್ಯಕ್ಷರನ್ನು ಪದಚ್ಯುತಿಗೊಳಿಸುವ ಬಗ್ಗೆ ಸಂಘದ ಇತರ ರಾಜ್ಯ ನಾಯಕರುಗಳು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರುಗಳ ಸಹಿತ ಎಲ್ಲರೂ ಅಸಮಾಧಾನ ವ್ಯಕ್ತಪಡಿಸಿದ್ದರೂ ಅವರುಗಳ ಮಾತಿಗೆ ಬೆಲೆಕೊಡದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ನಮಗೆ ರಾಜ್ಯ ಸಂಘದ ಮೇಲೆ ದ್ವೇಷವಿಲ್ಲ, ಆದರೆ ಅಧ್ಯಕ್ಷರಾದಿಯಾಗಿ ಮೂವರು ಕೆಳಗಿಳಿಯುವವರೆಗೂ ಯಾವದೇ ಸಹಕಾರ ನೀಡುವದಿಲ್ಲ. ರೈತ, ಜನಪರ ಹೋರಾಟವನ್ನು ಮುಂದುವರಿಸುವದಾಗಿ ಹೇಳಿದರು. ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷ ಹೂವಯ್ಯ ಮಾತನಾಡಿ; ಪ್ರಜಾಸತ್ತಾತ್ಮಕ ಚಿಂತನೆಯಡಿ ರೈತ ಪರವಾದ ಉತ್ತಮ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ರೈತರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ಗಾಗಿ ೨೦ ದಿನಗಳ ಹೋರಾಟ ಮಾಡಿ ಸರಕಾರದ ಗಮನ ಸೆಳೆಯಲಾಗಿದೆ. ರೈತ ಸಂಘದ ಪರಿಕಲ್ಪನೆಯೇ ಬೇರೆ ಇದೆ, ಇದನ್ನೆಲ್ಲ ಸಹಿಸದೆ ಪದಚ್ಯುತಿಗೊಳಿಸಿರುವದಾಗಿ ಹೇಳಿಕೆ ನೀಡಿರುವದು ಬಾಲಿಶವಾದುದು. ಮುಂದೆಯೂ ಹಲವು ಚಟುವಟಿಕೆಗಳೊಂದಿಗೆ ಕೊಡಗು ಜಿಲ್ಲಾ ಸಂಘ ರಾಜ್ಯದಲ್ಲಿಯೇ ಮಾದರಿ ಸಂಘವಾಗಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ಅಧ್ಯಕ್ಷ ಆಲೆಮಾಡ ಮಂಜುನಾಥ್, ಸೋಮವಾರಪೇಟೆ ಅಧ್ಯಕ್ಷ ದಿನೇಶ್, ಪ್ರಮುಖ ಎ.ಎನ್. ಕುಶಾಲಪ್ಪ ಇದ್ದರು.