ಚೆಯ್ಯಂಡಾಣೆ, ಆ. ೩: ವಯನಾಡ್ ಜಿಲ್ಲೆಯ ಮೆಪ್ಪಾಡಿ ಎಂಬಲ್ಲಿ ಸಂಭವಿಸಿದ ಭೂ ಕುಸಿತ ಹಾಗೂ ಭೀಕರ ದುರಂತದಲ್ಲಿ ಸಂತ್ರಸ್ತರಾದವರ ನೆರವಿಗೆ ಕೊಡಗಿನ ಸಂಘಟನೆಗಳು ಸಹಾಯ ಹಸ್ತ ನೀಡುತ್ತಿವೆ.

ಕೊಡಗಿನ ಸಂಘಟನೆಗಳಾದ ಸುನ್ನಿ ಯುವಜನ ಸಂಘ (ಎಸ್‌ವೈಎಸ್), ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್‌ಎಸ್‌ಎಫ್) ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಂಜೆ), ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಅದನ್ನು ವಯನಾಡ್ ಜಿಲ್ಲಾ ಎಸ್‌ವೈಎಸ್ ಸಾಂತ್ವನ ವಿಭಾಗಕ್ಕೆ ಹಸ್ತಾಂತರಿಸಲಾಯಿತು.

ಇನ್ನು ಕೂಡ ಕೊಡಗಿನ ಎಲ್ಲಾ ಯುನಿಟ್‌ಗಳಿಂದ ಸಂತ್ರಸ್ತರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಶೇಖರಿಸುತ್ತಿದ್ದು ಅಲ್ಲಿಗೆ ಬೇಕಾದ ಎಲ್ಲಾ ರೀತಿಯ ನೆರವನ್ನು ಸಂಘಟನೆ ನೀಡಲು ಸಿದ್ದವಿದೆ ಎಂದು ಸಂಘಟನೆಯ ಜಿಲ್ಲಾ ನಾಯಕರುಗಳು ಹೇಳುತ್ತಾರೆ.