ಕಣಿವೆ, ಆ. ೩: ಕಾವೇರಿ ಕಣಿವೆಯ ಮುಖ್ಯ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯ ನಾಡಿನ ಲಕ್ಷಾಂತರ ಜನರ ಆಶಾಕಿರಣವಾಗಿದ್ದು ನಾಡಿನ ಜೀವಕೋಟಿಗಳ ದಣಿವು ನೀಗಿಸುತ್ತಿದೆ.
ಆದರೆ ಇನ್ನೊಂದು ಬದಿಯಲ್ಲಿ ಜಲಾಶಯ ನಿರ್ಮಾಣಕ್ಕಾಗಿ ಮನೆ - ಮಠ, ಆಸ್ತಿ - ಪಾಸ್ತಿಗಳನ್ನು ನಿರ್ನಾಮ ಮಾಡಿಕೊಂಡ ಮಂದಿ ಇನ್ನೂ ಕೂಡ ಸರಿಯಾದ ಸೌಕರ್ಯಗಳು ಸಿಗದೇ ಪರಿತಪಿಸಿ ಕಣ್ಣೀರಿನಲ್ಲಿಯೇ ದಿನಗಳೆಯುವ ದುಸ್ಥಿತಿ ಮಾತ್ರ ಶೋಚನೀಯ. ಹಾಗಾಗಿ ಈ ಜಲಾಶಯ ಜಿಲ್ಲೆಯ ಕೃಷಿಕರಿಗೆ ಮಾರಕವಾಗಿದ್ದರೆ ನೆರೆ ಜಿಲ್ಲೆಯ ಕೃಷಿಕರಿಗೆ ಪೂರಕವಾಗಿದೆ.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದಿ. ವೀರೇಂದ್ರ ಪಾಟೀಲರ ದೂರದೃಷ್ಟಿಯ ಫಲವಾಗಿ ೧೯೬೯ ರಲ್ಲಿ ಶಂಕುಸ್ಥಾಪನೆಗೊAಡು ಜಲಾಶಯದ ಕಾಮಗಾರಿ ಆರಂಭವಾಗಿತ್ತು.
ಯೋಜನೆಗೆ ವ್ಯಾಪಕ ವಿರೋಧ
ಹಾರಂಗಿ ಜಲಾಶಯ ನಿರ್ಮಾಣಗೊಳ್ಳುವ ಸಂದರ್ಭ ಅಂದಿನ ಸ್ಥಳೀಯ ರೈತ ಮುಖಂಡರಾಗಿದ್ದ ದಿ. ಡಿ. ಹನುಮರಾಜೇ ಅರಸು ಹಾಗೂ ಕರಿಯಪ್ಪ ಅವರ ನೇತೃತ್ವದ ಸಾಕಷ್ಟು ಮಂದಿ ಶಂಕುಸ್ಥಾಪನೆ ನೆರವೇರಿಸಲು ಖುದ್ದು ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ಸಮ್ಮುಖದಲ್ಲಿ ಜಲಾಶಯವನ್ನು ನಿರ್ಮಿಸಲು ಹೊರಟ ರಾಜ್ಯ ಸರ್ಕಾರದ ತೀರ್ಮಾನವನ್ನು ಬಲವಾಗಿ ಖಂಡಿಸಿದ್ದರು.
ಜಲಾಶಯ ನಿರ್ಮಾಣದ ಶಂಕುಸ್ಥಾಪನಾ ಮಹೋತ್ಸವ ಸಂದರ್ಭ ತೀವ್ರವಾಗಿ ಪ್ರತಿಭಟಿಸಿದ್ದ ಸ್ಥಳೀಯ ಮಂದಿಯ ಮೇಲೆ ಯಾವುದೇ ಕೋಪ ಅಥವಾ ಆಕ್ರೋಶ ವ್ಯಕ್ತಪಡಿಸದ ವೀರೇಂದ್ರ ಪಾಟೀಲರು ಬಳಿಕ ರೈತ ಪ್ರಮುಖರು ಹಾಗೂ ಸ್ಥಳೀಯರನ್ನು ಸಮಾಧಾನಿಸಿ ಯೋಜನೆಯ ಮಹತ್ವಗಳನ್ನು ವಿವರಿಸಿದ್ದರು.
ಬಳಿಕ ಸತತವಾಗಿ ಹತ್ತು ವರ್ಷಗಳ ನಿರಂತರ ಕಾಮಗಾರಿಯ ನಂತರ ಜಲಾಶಯ ೧೯೭೯ ರಲ್ಲಿ ನಾಡಿನ ರೈತ ಕುಲ ಹಾಗೂ ಜೀವ ಸಂಕುಲಕ್ಕೆ ಅರ್ಪಣೆಯಾಗಿದ್ದು ಈಗ ಇತಿಹಾಸ.
ವೀರೇಂದ್ರ ಪಾಟೀಲರ ಹೆಸರು ಚಿರಸ್ಥಾಯಿಗೊಳಿಸಲು ತೀರ್ಮಾನ
ನಾಡಿನ ಜನ ಹಾಗೂ ಜೀವಕೋಟಿಯ ದಣಿವಾರಿಸುತ್ತಿರುವ ಹಾರಂಗಿ ಜಲಾಶಯದ ಪಿತಾಮಹ ವೀರೇಂದ್ರ ಪಾಟೀಲರ ಹೆಸರನ್ನು ಜಲಾಶಯದ ಆವರಣದಲ್ಲಿ ಚಿರಸ್ಥಾಯಿಗೊಳಿಸಲು ಮುಂದಾಗಿರುವ ಕುಶಾಲನಗರ ತಾಲೂಕಿನ ಸಮಾನ ಮನಸ್ಕ ಪಡೆಯೊಂದು ಸ್ಥಳೀಯ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸಹಯೋಗದೊಂದಿಗೆ ಜಲಾಶಯದ ಮುಂಬದಿಯ ಪ್ರವೇಶ ದ್ವಾರದ ವೃತ್ತದಲ್ಲಿ ವೀರೇಂದ್ರ ಪಾಟೀಲ್ ವೃತ್ತ ನಿರ್ಮಿಸಬೇಕೆಂದು ಪಣತೊಟ್ಟಿದೆ.
ಸಾವಿರಾರು ಎಕರೆ ಅರಣ್ಯ ಭೂಮಿ ಮೀಸಲು
ಹಾರಂಗಿ ಜಲಾಶಯ ನಿರ್ಮಾಣ ಮಾಡಲು ಅಪಾರ ಪ್ರಮಾಣದ ಭೂಮಿ ಹಾಗೂ ವಾಸದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ನೀಡಲು ಜಲಾಶಯದ ಎಡ ಬದಿಯ ಯಡವನಾಡು ಭಾಗದಲ್ಲಿ ೯೦೦ ಎಕರೆ ಅರಣ್ಯ ಹಾಗೂ ಜಲಾಶಯದ ಬಲ ಬದಿಯ ಅತ್ತೂರು ವಿಭಾಗದ ೨,೦೦೦ ಎಕರೆ ಅರಣ್ಯ ಪ್ರದೇಶವನ್ನು ಸರ್ಕಾರ ಮೀಸಲಿಟ್ಟಿತು.
ಆದರೆ ಮೀಸಲಿಟ್ಟ ಈ ಅರಣ್ಯ ಭೂಮಿಯನ್ನು ಸಂತ್ರಸ್ತರಿಗೆ ಸಮರ್ಪಕವಾಗಿ ನೀಡಲು ಸರ್ಕಾರಗಳು ವಿಫಲವಾದವು. ಅಂದರೆ ಜಲಾಶಯ ನಿರ್ಮಾಣಕ್ಕೆ ಗರಿಷ್ಠ ೨೫ ರಿಂದ ೫೦ ಎಕರೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ತಲಾ ಒಂದೆರಡು ಎಕರೆ ಭೂಮಿ ಕಳೆದುಕೊಂಡವರಿಗೂ ನಾಲ್ಕು ಎಕರೆ ಅರಣ್ಯ ಭೂಮಿಯನ್ನು ನೀಡಲಾಯಿತು.
ಹಾಗೋ ಹೇಗೋ ಹೊನ್ನ ಸಿರಿ ನೀಡುತ್ತಿದ್ದಂತಹ ಚಿನ್ನದಂತ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರು ನಿತ್ಯವೂ ಕಾಡು ಪ್ರಾಣಿಗಳ ಹಾವಳಿಯಿಂದ ನಲುಗಿ ಬೆಳೆ ನಷ್ಟ ಮಾಡಿಕೊಳ್ಳುವಂತಹ ದಯನೀಯ ಸ್ಥಿತಿ ದಶಕಗಳಿಂದಲೂ ನಿರಂತರವಾಗಿ ಮುಂದುವರೆದಿದೆ.
ಹಾಗಾಗಿ ಒಂದರ್ಥದಲ್ಲಿ ಜಲಾಶಯದ ನಿರ್ಮಾಣಕ್ಕೆ ಕಾರಣರಾದ ಅದೆಷ್ಟೋ ಮಂದಿ ಕೃಷಿಕರ ಬದುಕನ್ನು ನಿರ್ನಾಮ ಮಾಡಿರುವ ಈ ಜಲಾಶಯ ಕೊಡಗು ಜಿಲ್ಲೆಯ ಪಾಲಿಗೆ ನೀರು ಸಂಗ್ರಹಣಾ ತೊಟ್ಟಿಯಂತಾಗಿದೆ.
ಅತ್ಯಲ್ಪ ಕೃಷಿ ಭೂಮಿಗೆ ನೀರು
ಕುಶಾಲನಗರ ತಾಲೂಕಿನ ಹುಲುಗುಂದದ ಬಳಿ ಇರುವ ಈ ಜಲಾಶಯದ ನೀರಿನ ಬಳಕೆಯ ಅಚ್ಚುಕಟ್ಟು ವಿಸ್ತೀರ್ಣ ಒಟ್ಟು ೧.೬೮ ಲಕ್ಷ ಹೆಕ್ಟೇರ್. ಆದರೆ ಕೊಡಗು ಜಿಲ್ಲೆಯ ಕೇವಲ ಎರಡೂವರೆ ಸಾವಿರ ಹೆಕ್ಟೇರ್ ಭೂಮಿಗಷ್ಟೇ ಇದರ ಪ್ರಯೋಜನವಾಗುತ್ತಿದೆ.
ಅಂದರೆ ಕೇವಲ ಕುಶಾಲನಗರ ತಾಲೂಕಿನ ಕೂಡಿಗೆ, ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಈ ನಾಲ್ಕು ಗ್ರಾ.ಪಂ.ಗಳ ಕೆಲವೇ ರೈತರ ಕೃಷಿ ಭೂಮಿಗೆ ನೀರು ಉಣಿಸಬೇಕಿದ್ದರೂ ಕೂಡ ಕೊನೆಭಾಗದ ಅಚ್ಚುಕಟ್ಟು ಭೂಮಿಗೆ ನೀರು ಹರಿಸದಂತಹ ದುಸ್ಥಿತಿಯಲ್ಲಿ ಹಾರಂಗಿಯ ಕಾಲುವೆಗಳು ಹಾಗೂ ತೂಬುಗಳಿವೆ.
ಬೇಸಿಗೆ ಬೆಳೆಗೂ ನೀರಿಲ್ಲ
ಜಿಲ್ಲೆಯ ಜನರ ನೆಮ್ಮದಿಯನ್ನು ನುಚ್ಚುನೂರು ಮಾಡಿ ನಿರ್ಮಾಣವಾದ ಜಲಾಶಯದ ನೀರನ್ನು ಮುಂಗಾರು ಹಂಗಾಮಿಗೆ ಸಮರ್ಪಕವಾಗಿ ಹರಿಸುವ ಜೊತೆಗೆ ಕೇವಲ ಕೊಡಗಿನ ಕೃಷಿಕರಿಗೆ ಬೇಸಿಗೆಯ ಬೆಳೆಗೂ ನೀರು ಹರಿಸಬೇಕೆಂಬ ಒಪ್ಪಂದದಲ್ಲಿ ನಿರ್ಮಾಣವಾದ ಜಲಾಶಯದಲ್ಲಿ ಕಳೆದ ೨೦ ವರ್ಷಗಳಿಂದ ಬೇಸಿಗೆ ಬೆಳೆಗೆ ನೀರನ್ನು ಹರಿಸುತ್ತಿಲ್ಲ.
ಜಲಾಶಯದ ಆಸುಪಾಸಿನ ಕೃಷಿಕರಿಗೂ ಪ್ರಯೋಜನವಿಲ್ಲ
ಜಲಾಶಯ ನಿರ್ಮಾಣಕ್ಕಾಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಕಳೆದುಕೊಂಡ ನೂರಾರು ಕೃಷಿಕರು ಇಂದು ನೀರಾವರಿ ಸೌಲಭ್ಯವಿಲ್ಲದೇ ಪರದಾಡುತ್ತಿದ್ದರೂ ಕೂಡ ಆ ಮಂದಿಗೆ ಕೃಷಿಗೆ ಇರಲೀ ಕುಡಿಯಲೂ ಕೂಡ ಈ ಜಲಾಶಯದ ನೀರು ಒದಗುತ್ತಿಲ್ಲ ಎಂಬುದು ಜಲಾಶಯದ ಎಡ ಹಾಗೂ ಬಲಭಾಗದ ಪುನರ್ವಸತಿ ಕೃಷಿಕರ ಅಳಲಾಗಿದೆ.
ನೆರೆಯ ತಾಲೂಕುಗಳ ರೈತರಿಗಷ್ಟೇ ಇದರ ಅನುಕೂಲ
ಹಾರಂಗಿ ಜಲಾಶಯದಲ್ಲಿ ಸಂಗ್ರಹವಾಗುವ ನೀರು ನೆರೆಯ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೃಷಿಕರಿಗೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್. ನಗರ ತಾಲೂಕುಗಳ ಕೃಷಿಕರಿಗಷ್ಟೇ ಪ್ರಯೋಜನವಾಗುತ್ತಿದೆ.
ಇನ್ನು ಜಲಾಶಯದ ಎಡದಂಡೆಯಲ್ಲಿ ಜಲವಿದ್ಯುತ್ ತಯಾರಿಕಾ ಘಟಕವಿದ್ದು, ಜಲಾಶಯದ ನೀರನ್ನು ಬಳಸಿ ತಯಾರಿಸುವ ವಿದ್ಯುತ್, ಜಲಾಶಯದ ಹಿನ್ನೀರು ಪ್ರದೇಶದ ಮನೆಗಳನ್ನು ಬೆಳಗದಿರುವುದು ದುರ್ದೈವದ ಸಂಗತಿ. ಏಕೆಂದರೆ ಇಂದಿಗೂ ಕೂಡ ಅನೇಕ ಗಿರಿಜನ ಹಾಡಿಗಳು ಹಾಗೂ ಕಾಡಂಚಿನ ಗ್ರಾಮಗಳಿಗೆ ಸಮರ್ಪಕವಾದ ವಿದ್ಯುತ್ ಸೌಲಭ್ಯ ಒದಗಿಸಲಾಗಿಲ್ಲ.
ಎಲ್ಲೋ ಕಾಟಾಚಾರಕ್ಕೆ ವಿದ್ಯುತ್ ಅಳವಡಿಸಲಾಗಿದ್ದರೂ ಕೂಡ ಯಾವಾಗಲೂ ಇಲ್ಲಿ ಕತ್ತಲೆಯೇ ಆಳುತ್ತಿರುತ್ತದೆ. ಒಟ್ಟಾರೆ ಹಾರಂಗಿ ಜಲಾಶಯ ಜಿಲ್ಲೆಯ ರೈತರ ಕೃಷಿ ಬದುಕಿಗೆ ಪೂರಕವಾಗಿಲ್ಲ.
- ಕೆ.ಎಸ್. ಮೂರ್ತಿ