ಮಡಿಕೇರಿ, ಆ. ೩: ಕೊಡಗಿನಲ್ಲಿಂದು ಕಕ್ಕಡ ೧೮ರ ಸಂಭ್ರಮ. ಮದ್ದು ಪಾಯಸ, ಮದ್ದು ಪುಟ್ಟು, ನಾಟಿ ಕೋಳಿಯ ಸ್ವಾದದ ಜತೆಗೆ ಒಂದಿಷ್ಟು ‘ಔಷಧಿ’ಗೆ ಹೇಳಿದಂತಹ ವಾತಾವರಣ ಶನಿವಾರದಂದು ಜಿಲ್ಲೆಯಲ್ಲಿ ಕಂಡುಬAದಿತು. ಮಳೆಯ ಪ್ರಮಾಣ ಕಡಿಮೆಯಿತ್ತಾದರೂ ನಿರಂತರವಾಗಿ ತುಂತುರು ಮಳೆಗಿಂತ ತುಸು ಹೆಚ್ಚೆಂಬAತೆ ದಿನವಿಡೀ ಮಳೆಯೂ ಇತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಂತೂ ವಿಪರೀತ ಚಳಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಇಡೀ ನಗರದಲ್ಲಿ ದಟ್ಟನೆಯ ಮಂಜು ಆವರಿಸಿ ರಸ್ತೆಗಳಲ್ಲಿ ವಾಹನ ಓಡಾಟಕ್ಕೆ ಸಮಸ್ಯೆಯಾದಂತಿತ್ತು. ಬಹುತೇಕ ಎಲ್ಲಾ ವಾಹನ ಸವಾರರು ಮುಂಜಾಗ್ರತೆಯಾಗಿ ಹೆಡ್ಲೈಟ್ ಆನ್ ಮಾಡಿಕೊಂಡೇ ವಾಹನ ಚಲಾಯಿಸುತ್ತಿದ್ದರು. ಜಿಲ್ಲೆಯ ಇತರೆಡೆಗಳಲ್ಲೂ ಮಳೆ ಇಳಿಮುಖ ವಾಗಿದ್ದರೂ ಚಳಿಯ ವಾತಾವರಣ ಇದ್ದ ಬಗ್ಗೆ ವರದಿಯಾಗಿದೆ.
ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೧೭ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೨.೧೨, ವೀರಾಜಪೇಟೆ ೦.೫೮, ಪೊನ್ನಂಪೇಟೆ ೦.೪೬, ಸೋಮವಾರಪೇಟೆ ೧.೩೪ ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೩೩ ಇಂಚು ಮಳೆಯಾಗಿದೆ. ಭಾಗಮಂಡಲ ಹೋಬಳಿಯಲ್ಲಿ ೨.೮೮, ಸಂಪಾಜೆ ೨.೮೮ ಹಾಗೂ ಶಾಂತಳ್ಳಿ ಹೋಬಳಿಯಲ್ಲಿ ೨.೪೪ ಇಂಚು ಮಳೆಯಾಗಿರುವುದು ಹೊರತುಪಡಿಸಿದರೆ, ಇನ್ನಿತರ ಹೋಬಳಿಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇತ್ತು.