ಸಿದ್ದಾಪುರ, ಆ.೩ : ನೆಲ್ಯಹುದಿಕೇರಿ ಗ್ರಾಮದಲ್ಲಿ ಮುಂದುವರೆದ ಕಾಡಾನೆ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದಾರೆ.
ಜನವಸತಿ ಪ್ರದೇಶಗಳಿಗೆ ರಾಜಾರೋಷವಾಗಿ ನುಗ್ಗುತ್ತಿರುವ ಕಾಡಾನೆಗಳು ಮನೆ ಸಮೀಪದಲ್ಲಿರುವ ಸಾಮಗ್ರಿಗಳನ್ನು ನಾಶಪಡಿಸುತ್ತಿವೆ. ನೆಲ್ಯಹುದಿಕೇರಿ ಗ್ರಾಮದ ಎಂ.ಜಿ ಕಾಲೋನಿ, ನಲ್ವತ್ತೆಕರೆಯ ಜನವಸತಿ ಪ್ರದೇಶಗಳಲ್ಲಿ ಒಂಟಿಸಲಗ ಕಾಣಿಸಿಕೊಂಡು ಸಾರ್ವಜನಿಕರನ್ನು ಭಯಭೀತರನ್ನಾಗಿಸುತ್ತಿದೆ. ಮನೆಯ ಸಮೀಪಕ್ಕೆ ಬರುವ ಒಂಟಿ ಸಲಗ ನೀರಿನ ಟ್ಯಾಂಕ್, ಹೂ ಗಿಡಗಳು, ಅಡಿಕೆ, ಬಾಳೆ, ತೆಂಗುಗಳನ್ನು ನಾಶಪಡಿಸುತ್ತಿದೆ.
ನಲ್ವತ್ತೆಕರೆಯ ಚಂದ್ರ ಎಂಬವರ ಮನೆಯ ಮುಂಭಾಗ ನಿಲ್ಲಿಸಲಾಗಿದ್ದ ವಾಹನದ ಮೇಲೆ ಕಾಡಾನೆ ದಾಳಿ ನಡೆಸಿದ್ದು, ವಾಹನಕ್ಕೆ ಹಾನಿಯಾಗಿದೆ. ನೆಲ್ಯಹುದಿಕೇರಿ ಎಂ.ಜಿ. ಕಾಲೋನಿಯ ಮುನಿಯಾಂಡಿ ಎಂಬವರ ನೀರಿನ ಟ್ಯಾಂಕ್‌ನ್ನು ಹಾನಿಗೊಳಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿನೀಡಿ ಪರಿಶೀಲಿಸಿದರು.
ಚೆಯ್ಯಂಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆ ಪಟ್ಟಣದಿಂದ ಚೇಲಾವರಕ್ಕೆ ತೆರಳುವ ಮುಖ್ಯರಸ್ತೆಯಲ್ಲಿ ಕಾಡಾನೆಗಳು ಮರಿಯಾನೆ ಜೊತೆಗೆ ರಸ್ತೆಯಲ್ಲೇ ಸಂಚರಿಸುತ್ತಿರುವ ದೃಶ್ಯ ಕಂಡು ಈ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ.
ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಡಾನೆ ಸಂಚರಿಸುತ್ತಿರುವ ರಸ್ತೆಯ ಸಮೀಪದಲ್ಲೇ ಈ ವ್ಯಾಪ್ತಿಯ ನೀರು ಸರಬರಾಜು ಕೇಂದ್ರವಿದೆ. ಅಲ್ಲಿಗೆ ಪ್ರತಿದಿನ ವಾಟರ್ ಮೆನ್ ತೆರಳುತ್ತಿದ್ದು, ಅವರಿಗೂ ಕೂಡ ಭಯದ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಕಾಡಾನೆಗಳನ್ನು ನಾಡಿಗೆ ನುಸುಳದ ರೀತಿಯಲ್ಲಿ ಶಾಶ್ವತ ಕ್ರಮವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಸಾರ್ವಜನಿಕರು ಆಗ್ರಹಿಸಿದ್ದಾರೆ.