ಸೋಮವಾರಪೇಟೆ, ಆ. ೩: ಸಮೀಪದ ಚೌಡ್ಲು ಗ್ರಾ. ಪಂ. ವ್ಯಾಪ್ತಿಯ ಗಾಂಧಿನಗರದಲ್ಲಿ ಸಂಭವಿಸಿರುವ ಭೂ ಕುಸಿತದಿಂದ ಆತಂಕ ಹೆಚ್ಚಿದೆ. ಭಾರೀ ಮಳೆಗೆ ಚೌಡ್ಲು ಗ್ರಾಮದ ಯೋಗೇಂದ್ರ ಅವರಿಗೆ ಸೇರಿದ ಕಾಫಿ ತೋಟ ಸುಮಾರು ಮುಕ್ಕಾಲು ಏಕರೆಯಷ್ಟು ಸಂಪೂರ್ಣ ಕುಸಿದಿದ್ದು, ಇದಕ್ಕೆ ಒತ್ತಿಕೊಂಡAತೆ ಇದ್ದ ಮನೆಗಳೀಗ ಅಪಾಯದ ಅಂಚಿನಲ್ಲಿವೆ. ಭಾರೀ ಗಾಳಿ ಮಳೆಗೆ ಕಾಫಿ ತೋಟ ಸಂಪೂರ್ಣ ನೆಲಸಮ ಗೊಂಡಿದೆ. ತೋಟದಲ್ಲಿದ್ದ ಕಾಫಿ, ಅಡಿಕೆ ಸೇರಿದಂತೆ ಮರಗಳು ಧರಾಶಾಹಿಯಾಗಿದ್ದು, ಐದು ವಾಸದ ಮನೆಗಳಿಗೂ ಸಂಚಕಾರ ತಂದೊಡ್ಡಿದೆ. ಕೆಲ ವರ್ಷಗಳ ಹಿಂದೆ ಸುಮಾರು ೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆಯೂ ಸಹ ಭೂಕುಸಿತಕ್ಕೆ ಸಿಲುಕಿ ಕೊಚ್ಚಿಹೋಗಿದೆ.

ಗಾಂಧಿನಗರದ ನಾರಾಯಣ, ಜಮೀರ್ ಅಹಮ್ಮದ್ ಅವರುಗಳ ಮನೆಯಿಂದ ಕೆಲವೇ ಅಡಿಗಳ ಅಂತರದಲ್ಲಿ ಕುಸಿತ ಸಂಭವಿಸಿದ್ದು, ಈ ಎರಡೂ ಮನೆಗಳೂ ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಮಳೆ ಹೆಚ್ಚಾದರೆ ಇನ್ನಷ್ಟು ಕುಸಿದು ಮನೆ ಜರುಗುವ ಆತಂಕ ಮನೆಮಾಡಿದೆ. ಸದ್ಯಕ್ಕೆ ಟಾರ್ಪಲ್ ಹಾಕಿ ಮಳೆ ನೀರಿನಿಂದ ಬರೆಯನ್ನು ರಕ್ಷಿಸುವ ಕೆಲಸ ಮಾಡಲಾಗಿದೆ.

ಇದಕ್ಕೆ ಒತ್ತಿಕೊಂಡAತೆ ಇರುವ ಸ್ವಾಮಿ, ಸವಿತ, ಜೋಷಿ ಅವರುಗಳ ಮನೆಯೂ ಅಪಾಯದ ಅಂಚಿನಲ್ಲಿದೆ. ಈಗಾಗಲೇ ನಾರಾಯಣ ಹಾಗೂ ಜಮೀರ್ ಅಹಮ್ಮದ್ ಅವರುಗಳ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ.

ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ, ತಹಶೀಲ್ದಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಸೇರಿದಂತೆ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟ ಕುಸಿದಿರುವುದರಿಂದ ಯೋಗೇಂದ್ರ ಅವರಿಗೂ ಭಾರೀ ನಷ್ಟವಾಗಿದೆ. ಇತ್ತ ಬಡ ಕುಟುಂಬಗಳ ಮನೆಗಳಿಗೂ ಆತಂಕ ಹೆಚ್ಚಿಸಿದೆ. ಮಳೆ ಕಡಿಮೆಯಾದೊಡನೆ ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆ ನಿರ್ಮಿಸಿದರೆ ಮಾತ್ರ ಮನೆಗಳು ಉಳಿಯಲಿವೆ. ಲೋಕೋಪಯೋಗಿ ಇಲಾಖಾಧಿ ಕಾರಿಗಳು ಮಳೆಹಾನಿ ಪರಿಹಾರ ಕಾಮಗಾರಿಯಡಿ ತುರ್ತು ಅನುದಾನ ಮೀಸಲಿಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.