ಕಣಿವೆ, ಆ.೩ : ಕಳೆದ ೨೦೨೧- ೨೨ ನೇ ಸಾಲಿನಲ್ಲಿ ರೂ ೩ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಕುಶಾಲನಗರದ ಮುಳ್ಳುಸೋಗೆ ದ್ವಿಪಥ ರಸ್ತೆ ಸಂಪೂರ್ಣ ಹಾನಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಮಾಕುಟ್ಟ - ಕೊಣನೂರು ಮಾರ್ಗದ ೧೮.೭೫ ನೇ ಕಿ.ಮೀನಿಂದ ೨೦.೮೫ ರವರೆಗಿನ ಕೇವಲ ಒಂದೂವರೆ ಕಿಮೀ ಉದ್ದಳತೆಯ ರಾಜ್ಯ ಹೆದ್ದಾರಿಯನ್ನು ಕಳಪೆ ಗುಣಮಟ್ಟದಿಂದ ನಿರ್ಮಿಸಿದ ಕಾರಣ ಕೇವಲ ಎರಡೇ ವರ್ಷಗಳಲ್ಲಿ ಗುಂಡಿ ಬಿದ್ದಿದೆ. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ಕಿತ್ತುಹೋಗಿದ್ದು, ಸಂಚಾರಕ್ಕೆ ಸಂಚಕಾರವಾಗಿದೆ.

ಕುಶಾಲನಗರದ ಹಾಸನ ರಸ್ತೆಯ ಸಾಯಿ ಬಡಾವಣೆಯಿಂದ ಗುಮ್ಮನಕೊಲ್ಲ್ಲಿವರೆಗೂ ನಿರ್ಮಿಸಿದ್ದ ಈ ರಸ್ತೆ ಇಂದು ರಸ್ತೆಯಾಗಿ ಉಳಿದಿಲ್ಲ. ಕುಶಾಲನಗರ ಕೈಗಾರಿಕಾ ಪ್ರದೇಶವೂ ಸೇರಿದಂತೆ ಹಾಸನ, ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನಂಪ್ರತೀ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಇದೀಗ ಕಿತ್ತುನಿಂತಿರುವ ಈ ರಸ್ತೆಯಲ್ಲಿ ದ್ವಿಚಕ್ರ ಸವಾರರು ಜಾಗ್ರತೆ ವಹಿಸದೇ ವಾಹನ ಚಲಾಯಿಸಿದಲ್ಲಿ ಆಸ್ಪತ್ರೆ ಸೇರುವುದು ಗ್ಯಾರಂಟಿ. ಮೂರು ಕೋಟಿ ವೆಚ್ಚದ ಈ ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿಯೂ ಇಲ್ಲದ ಕಾರಣ ಮಳೆಯ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಆದ್ದರಿಂದ ಈ ರಸ್ತೆಯನ್ನು ನಿರ್ಮಿಸಿದ ಅಭಿಯಂತರ ಹಾಗೂ ಗುತ್ತಿಗೆದಾರರ ವಿರುದ್ಧ ತನಿಖೆಯಾಗಬೇಕೆಂದು ಜಲಮಂಡಳಿ ಮಾಜಿ ಅಧ್ಯಕ್ಷರೂ ಆದ ಕಾಂಗ್ರೆಸ್ ಪ್ರಮುಖರಾದ ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ.

-ಕೆ.ಎಸ್. ಮೂರ್ತಿ