ಮಡಿಕೇರಿ, ಆ. ೩: ವಿದ್ಯುತ್ ಸೇರಿದಂತೆ ಮೂಲಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಸರಿಯಾದ ಜಾಗೃತಿ ಇಲ್ಲದಾಗಿದ್ದು ಹೀಗಾಗಿಯೇ ಅನೇಕ ಸಮಸ್ಯೆಗಳಿಗೆ ನಿರೀಕ್ಷಿತ ಪರಿಹಾರ ದೊರಕದಾಗಿದೆ. ತಮ್ಮ ಮೂಲ ಹಕ್ಕುಗಳ ಬಗ್ಗೆ ಗ್ರಾಹಕರು ಜಾಗೃತರಾಗಬೇಕಾದ ಅನಿವಾರ್ಯತೆ ಇಂದಿನ ಕಾಲಘಟ್ಟದಲ್ಲಿದೆ ಎಂದು ಬೆಂಗಳೂರಿನ ಗ್ರಾಹಕರ ಹಕ್ಕುಗಳ ಶಿಕ್ಷಣ ಮತ್ತು ಜಾಗೃತಿ ಟ್ರಸ್ಟ್ ಸ್ಥಾಪಕಾಧ್ಯಕ್ಷ ವೈ.ಜಿ. ಮುರಳೀಧರನ್ ಕರೆ ನೀಡಿದ್ದಾರೆ.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿತ ಗ್ರಾಹಕರ ಹಕ್ಕುಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುರಳೀಧರ್, ವಿದ್ಯುತ್, ಆಹಾರ ಪದಾರ್ಥ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ, ಅದನ್ನು ಬಳಸುವ ಗ್ರಾಹಕರಿಗೆ ತಮ್ಮ ಮೂಲ ಹಕ್ಕುಗಳ ಬಗ್ಗೆಯೇ ಸರಿಯಾದ ತಿಳುವಳಿಕೆ ಇಲ್ಲದಾಗಿದೆ. ಇದರಿಂದಾಗಿಯೇ ಸಮಸ್ಯೆಗಳು ಪರಿಹಾರ ಕಾಣುವ ಬದಲಿಗೆ ಮತ್ತಷ್ಟು ಹೆಚ್ಚಾಗುತ್ತಿದೆ. ಗ್ರಾಹಕರು ಜಾಗೃತರಾದಾಗ ಮಾತ್ರ ಅನೇಕ ಸಮಸ್ಯೆಗಳು ಸಮಾಜದಲ್ಲಿ ಪರಿಹಾರವಾಗುತ್ತದೆ ಎಂದು ಅವರು ಹೇಳಿದರು.

ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಸಮನ್ವಯ ಇದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಪರಿಸರ ಸಮತೋಲನದೊಂದಿಗೆ ಜಾರಿಯಾದಾಗ ದೇಶದ ಪ್ರಗತಿಯೂ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟ ಮುರಳೀಧರ್, ವಿದ್ಯುತ್ ರಂಗದಲ್ಲಿ ನಗರ ಪ್ರದೇಶಗಳ ಪೈಕಿ ಬಿಲ್ ಸಮಸ್ಯೆ ಕಂಡುಬರುತ್ತಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆ ಎದುರಿಸುತ್ತಿದ್ದೇವೆ. ಗ್ರಾಹಕ ತನಗೆ ಬರುವ ಬಿಲ್‌ಅನ್ನು ಸರಿಯಾಗಿ ತಿಳಿದುಕೊಳ್ಳದೆ ಇರುವುದರಿಂದಾಗಿ ಅನೇಕ ಗ್ರಾಹಕರು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯುತ್ ನಿಯಂತ್ರಣಗಳೇನು, ಗ್ರಾಹಕರಿಗೆ ಇರುವ ಹಕ್ಕುಗಳೇನು ಎಂಬುದನ್ನು ಸ್ಥಳೀಯವಾಗಿ ಸಂಘ-ಸAಸ್ಥೆಗಳ ಮೂಲಕ ಜನರಿಗೆ ತಿಳಿಸಬೇಕಾದ ಅಗತ್ಯ ಇಂದಿನ ಕಾಲಘಟ್ಟದಲ್ಲಿದೆ ಎಂದೂ ಮುರಳೀಧರನ್ ಹೇಳಿದರು.

ಪ್ರತಿ ತಿಂಗಳು ಪಡೆಯುವ ವಿದ್ಯುತ್ ಬಿಲ್‌ನ್ನು ಎಷ್ಟು ಗ್ರಾಹಕರು ಸರಿಯಾಗಿ ಓದಿ ಮಾಹಿತಿ ತಿಳಿಯುತ್ತಾರೆ ಎಂದು ಪ್ರಶ್ನಿಸಿದ ಮುರಳೀಧರನ್, ಬಿಲ್‌ನಲ್ಲಿ ನಮೂದಿಸಲಾಗುವ ಎಲ್ಲಾ ಅಂಶಗಳನ್ನು ಸರಿಯಾಗಿ ಓದಿ ಸೂಕ್ತವಾಗಿದೆಯೇ ಎಂದಾದ ಮೇಲೆ ಬಿಲ್ ಪಾವತಿಸಬೇಕು. ಇಲ್ಲದೇ ಹೋದಲ್ಲಿ ಬಿಲ್ ತಪ್ಪಾಗಿದ್ದರೂ ಗ್ರಾಹಕನ ಮೌನ ಭವಿಷ್ಯದಲ್ಲಿ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಎಚ್ಚರಿಸಿದರು.

ಕೊಡಗು ಜಿಲ್ಲಾ ಚೆಸ್ಕಾಂ ಕಾರ್ಯಪಾಲಕ ಅಭಿಯಂತರೆ ಅನಿತಾಭಾಯಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಜಿಲ್ಲೆಯಲ್ಲಿ ೧೩ ವಿದ್ಯುತ್ ಸಬ್‌ಸ್ಟೇಷನ್‌ಗಳ ಅಗತ್ಯವಿದ್ದು, ಆದರೆ ಕೇವಲ ೨ ಸಬ್‌ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಹೆಚ್ಚುವರಿ ಸಬ್‌ಸ್ಟೇಷನ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಇದು ಮಂಜೂರಾಗಿ ಕಾರ್ಯಪ್ರವೃತ್ತವಾದಲ್ಲಿ ಕೊಡಗಿನೆಲ್ಲೆಡೆ ವಿದ್ಯುತ್ ಸಮಸ್ಯೆ ಪರಿಹಾರ ಸಾಧ್ಯವಿದೆ ಎಂದರು.

ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಪ್ಪನೆರವಂಡ ನಂದಾ ಬೆಳ್ಯಪ್ಪ ಮಾತನಾಡಿ, ಚೆಸ್ಕಾಂ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ನಡುವೆ ಸೌಹಾರ್ಧತೆ ಇದ್ದಾಗ ಅನೇಕ ಸಮಸ್ಯೆಗಳು ಪರಿಹಾರವಾಗುತ್ತದೆ. ಬೆಳೆಗಾರರನ್ನು ಗಣನೆಗೆ ತೆಗೆದುಕೊಂಡು ವಿಶ್ವಾಸಯುತವಾಗಿ ಕಾರ್ಯನಿರ್ವಹಿಸಿದಾಗ ಚೆಸ್ಕಾಂಗೆ ತೋಟದೊಳಗೆ ಕೂಡ ತಂತಿ ಮಾರ್ಗ ಹಾಕಲು ಸುಲಭಸಾಧ್ಯವಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಕೊಡಗಿನ ಕಾಫಿ ಬೆಳೆಗಾರರೂ ಸೇರಿದಂತೆ ಕೃಷಿಕರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ಸಂಬAಧಿತ ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳುವ ಉದ್ದೇಶವಿದೆ ಎಂದು ನಂದಾ ಬೆಳ್ಯಪ್ಪ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಅಜ್ಜೀರಂಡ ಎ. ಚಂಗಪ್ಪ, ಕಾರ್ಯದರ್ಶಿ ಚೊಟ್ಟೆರ ಕೆ. ಬೆಳ್ಯಪ್ಪ ಹಾಜರಿದ್ದರು. ಜಿಲ್ಲೆಯಾದ್ಯಂತಲಿನ ಬೆಳೆಗಾರ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡು ಅನೇಕ ಮಾಹಿತಿಗಳನ್ನು ಗ್ರಾಹಕರ ಹಕ್ಕುಗಳ ಬಗ್ಗೆ ಪಡೆದರು. ಅಸೋಸಿಯೇಷನ್ ಗೌರವ ಸಲಹೆಗಾರ ಕೆ.ಕೆ. ವಿಶ್ವನಾಥ್ ವಂದಿಸಿದರು.