ಸಿದ್ದಾಪುರ, ಆ. ೩: ವಯನಾಡು ಭೂ ಕುಸಿತದಲ್ಲಿ ನಾಪತ್ತೆಯಾಗಿದ್ದ ಜಿಲ್ಲೆಯ ಕುಟುಂಬದವೊAದರ ಮೃತದೇಹಗಳು ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿರುವುದಾಗಿ ಕುಟುಂಬಸ್ಥರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತೆಕ್ರೆಯ ಪೊನ್ನಮ್ಮ ಎಂಬವರ ಮಗಳಾದ ದಿವ್ಯಾ (೩೫) ಹಾಗೂ ಆಕೆಯ ಮಗನಾದ ಲಕ್ಷಿತ್ (೧೦) ಮೃತದೇಹಗಳು ಶುಕ್ರವಾರ ಮಧ್ಯಾಹ್ನ ಚೂರಲ್ ಮಲ ಮನೆಯ ಸಮೀಪದಲ್ಲಿ ಮಣ್ಣಿನಡಿಯಿಂದ ಪತ್ತೆಯಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದ ಭೂ ಕುಸಿತದಲ್ಲಿ ದಿವ್ಯಾ, ಪತಿ ಸಿದ್ದರಾಜ್ ಹಾಗೂ ಮಗ ಲಕ್ಷಿತ್ ಸೇರಿದಂತೆ ಮನೆಯಲ್ಲಿದ್ದ ೯ ಮಂದಿ ನಾಪತ್ತೆಯಾಗಿದ್ದರು. ಬಳಿಕ ನಲ್ವತೆಕ್ರೆಯಲ್ಲಿದ್ದ ದಿವ್ಯಾ ಕುಟುಂಬಸ್ಥರು ನಲ್ವತೆಕ್ರೆಯಿಂದ ಮೇಪಾಡಿ ನಿರಾಶ್ರಿತರ ಕೇಂದ್ರಕ್ಕೆ ತೆರಳಿದ್ದರು. ಗುರುವಾರ ಬಾಲಕನೋರ್ವನ ಮೃತದೇಹ ಪತ್ತೆಯಾಗಿತ್ತು. ಮೃತಶರೀರ ಬಹುತೇಕ ಹಾನಿಯಾಗಿದ್ದರಿಂದ ದಿವ್ಯಾ ಕುಟುಂಬ ಸೇರಿದಂತೆ ೫ ಕುಟುಂಬದವರು ತಮ್ಮ ಕುಟುಂಬದ ಮಗನಾಗಿರಬಹುದೆಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಅದು ಲಕ್ಷಿತ್ ಮೃತದೇಹ ಅಲ್ಲವೆಂದು ಸಾಬೀತಾಗಿತ್ತು.
ಮೂರು ದಿನಗಳ ಹುಡುಕಾಟದ ನಂತರ ನಾಪತ್ತೆಯಾಗಿದ್ದ ೯ ಮಂದಿಯ ಪೈಕಿ ೮ ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಇನ್ನೊಬ್ಬರು ಇನ್ನೂ ಪತ್ತೆಯಾಗಿಲ್ಲ. ಮೃತರ ಅಂತ್ಯ ಸಂಸ್ಕಾರವನ್ನು ಮೇಪಾಡಿಯಲ್ಲೇ ನೆರವೇರಿಸಲಾಯಿತೆಂದು ಕುಟುಂಬಸ್ಥರು ತಿಳಿಸಿದ್ದಾರೆ.
ದಿವ್ಯಾ ಪತಿಯ ಕುಟುಂಬಸ್ಥರ ಮೃತದೇಹಗಳು ಘಟನಾ ಸ್ಥಳದ ಬೇರೆ ಬೇರೆ ಜಾಗಗಳಿಂದ ಪತ್ತೆಯಾದರೆ, ತಾಯಿ ಮತ್ತು ಮಗನ ಮೃತದೇಹಗಳು ಮನೆಯ ಅಕ್ಕಪಕ್ಕದಲ್ಲೇ ಪತ್ತೆಯಾಗಿದ್ದು, ಇಬ್ಬರ ಮೃತದೇಹಗಳಿಗೆ ಯಾವುದೇ ಹಾನಿ ಆಗಿರಲಿಲ್ಲವೆಂದು ಕುಟುಂಬಸ್ಥರು ತಿಳಿಸಿದ್ದಾರೆ.