ಮಡಿಕೇರಿ, ಆ. ೩: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಎಡೆಬಿಡದೆ ಸುರಿದ ಮಳೆಗೆ ಕೊಡಗು ಜಿಲ್ಲೆಯ ಬಹುತೇಕ ಜಲಪಾತಗಳು ಹಾಲ್ನೊರೆಯಂತೆ ಧುಮ್ಮಿಕ್ಕಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತಗಳನ್ನು ವೀಕ್ಷಿಸಲು ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಕೊಡಗಿನ ಜಲಪಾತಗಳು ಎಷ್ಟೇ ಮನಮೋಹಕವೋ ಅಷ್ಟೇ ಅಪಾಯಕಾರಿ ಕೂಡ. ಕೊಡಗಿನ ಮಲ್ಲಳ್ಳಿ ಫಾಲ್ಸ್, ಅಭಿಪಾಲ್ಸ್, ಇರ್ಪು, ಚೇಲಾವರ ಜಲಪಾತದಲ್ಲಿ ಮುಳುಗಿ ಸ್ಥಳೀಯರು ಹಾಗೂ ಪ್ರವಾಸಿಗರು ಸಾವನ್ನಪ್ಪಿರುವ ಹಲವು ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ. ಜಲಪಾತಗಳ ಪಕ್ಕದಲ್ಲೇ ಇರುವ ಬಂಡೆ ಕಲ್ಲುಗಳ ಮೇಲೆ ನಿಂತು ಸೆಲ್ಫಿ ಹಾಗೂ ರೀಲ್ಸ್ ಮಾಡುವ ಗೀಳಿಗೆ ಪ್ರಾಣ ಕಳೆದುಕೊಂಡ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಇದೀಗ ಜಿಲ್ಲೆಯ ಜಲಪಾತದ ಸೌಂದರ್ಯವನ್ನು ಸವಿಯಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬಹುತೇಕ ಜಲಪಾತಗಳಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲ. ಪ್ರವಾಸಿಗರು ಮತ್ತು ಸ್ಥಳೀಯರು ಜಲಪಾತಗಳ ಪಕ್ಕದಲ್ಲೇ ನಿಂತು ಫೋಟೋ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಕೈಹಾಕಿ ಪ್ರಾಣಕ್ಕೆ ಆಪತ್ತು ತರಲು ಮುಂದಾಗುತ್ತಿದ್ದಾರೆ. ಪ್ರವಾಸಿಗರ ಸೆಲ್ಫಿ ಗೀಳಿಗೆ ಪ್ರತಿವರ್ಷ ಜಲಪಾತಗಳು, ನದಿ ತೊರೆಗಳು ಮಾನವ ಬಲಿಯನ್ನು ಪಡೆಯುತ್ತಿದ್ದರು ಕೂಡ, ಪ್ರವಾಸಿಗರು ಎಚ್ಚೆತ್ತುಕೊಳ್ಳದೇ ಹುಚ್ಚಾಟ ಮೆರೆಯುತ್ತಿದ್ದಾರೆ.

ಪ್ರವಾಸಿ ತಾಣಗಳು, ಜಲಪಾತಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳ ನಿಯಮಗಳನ್ನು ಗಾಳಿಗೆ ತೂರಿ ಜಲಪಾತಗಳಲ್ಲಿ ತಾವು ನಡೆದದ್ದೇ ದಾರಿ ಎಂಬAತೆ ಹುಚ್ಚಾಟ ಮೆರೆಯುವ ದೃಶ್ಯಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ.

ಕೊಡಗು ಜಿಲ್ಲೆಯ ಗ್ರಾಮೀಣ ಭಾಗದಲ್ಲೇ ಅತೀ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಜಲಪಾತಗಳು ಇವೆ. ಜಲಪಾತಗಳನ್ನು ವೀಕ್ಷಿಸಿ ಪ್ರಕೃತಿ ಸೌಂದರ್ಯವನ್ನು ಆನಂದಿಸಿದರೆ ತೊಂದರೆಯಿಲ್ಲ. ಆದರೆ ಜಾರುವ ಬಂಡೆ ಕಲ್ಲುಗಳ ಮೇಲೆ ನಿಂತು, ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟಕ್ಕೆ ಜಿಲ್ಲೆಯ ಪ್ರಸಿದ್ಧ ಜಲಪಾತಗಳಾದ ಮಲ್ಲಳ್ಳಿ, ಚೇಲಾವರ, ಅಬ್ಬಿಫಾಲ್ಸ್, ಕೋಟೆ ಅಬ್ಬಿ ಜಲಪಾತಗಳಲ್ಲಿ ಪ್ರವಾಸಿಗರು ಅಜಾಗರೂಕತೆಯಿಂದ ನಡೆದುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಸ್ಥಳೀಯರ ಹುಚ್ಚಾಟಕ್ಕೆ ಕಡಿಮೆಯೇನಿಲ್ಲ. ಸೂಜಿಗಲ್ಲಿನಂತೆ ಸೆಳೆಯುವ ಜಲಪಾತದ ಪಕ್ಕದಲ್ಲೇ ನಿಂತು ಫೋಟೋ ಕ್ಲಿಕ್ಕಿಸುವ ದುಸ್ಸಾಹಸಕ್ಕೆ ಕೈಹಾಕುವ ಪ್ರವಾಸಿಗರು ಒಂದೆಡೆಡಯಾದರೆ, ಹಾಲ್ನೊರೆಯಂತೆ ಧುಮ್ಮಕ್ಕಿ ಹರಿಯುತ್ತಿರುವ ಜಲಪಾತಕ್ಕಿಳಿ ಯುವ ಹುಚ್ಚಾಟಕ್ಕೆ ಜಿಲ್ಲೆಯ ಯುವಕರು ಕೈಹಾಕುತ್ತಿರುವುದು ಅಪಾಯಕ್ಕೆ ದಾರಿ ಮಾಡಿಕೊಡುವಂತಿದೆ.

-ಕೆ.ಎA. ಇಸ್ಮಾಯಿಲ್ ಕಂಡಕರೆ