ಕೂಡಿಗೆ, ಆ. ೩: ಹಾರಂಗಿ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಯು ರೂ. ೫೦ಕೋಟಿ ವೆಚ್ಚದಲ್ಲಿ ನಡೆದರೂ ಸಹ ಇದೀಗ ಅಣೆಕಟ್ಟೆಯ ಸಮೀಪದ ಮುಖ್ಯನಾಲೆಯ ಎಡಭಾಗದ ಬರೆಕುಸಿತ ಉಂಟಾಗಿದೆ.
ಮುಖ್ಯ ನಾಲೆಯ ಕಾಂಕ್ರೀಟ್ ಲೈನಿಂಗ್ ಮಾಡಿರುವ ಜಾಗದಲ್ಲಿ ಅತಿಯಾದ ಮಳೆಯಿಂದಾಗಿ ಸಮೀಪದ ಬೆಟ್ಟದ ನೀರು ಬಂದ ಹಿನ್ನೆಲೆಯಲ್ಲಿ ಮತ್ತು ನೀರಿನ ಸಾಂದ್ರತೆಯು ಹೆಚ್ಚಳವಾದ್ದರಿಂದ ನಾಲೆಗೆ ಮಣ್ಣಿನ ಜೊತೆಗೆ ಕಾಂಕ್ರೀಟ್ ಲೈನಿಂಗ್ ಸಹ ಕುಸಿತಗೊಂಡಿದೆ.
ಸ್ಥಳಕ್ಕೆ ಹಾರಂಗಿ ನೀರಾವರಿ ವೃತ್ತ ಅಧೀಕ್ಷಕ ಅಭಿಯಂತರ ಕೆ.ಕೆ ರಘುಪತಿ ಸೇರಿದಂತೆ ಇಂಜಿನಿಯರ್ಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಮುಂದಿನ ದಿನಗಳಲ್ಲಿ ನಾಲೆಯ ನೀರು ಸ್ಥಗಿತಗೊಂಡ ನಂತರ ಕುಸಿತಗೊಂಡ ವ್ಯಾಪ್ತಿಯ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ, ಇಂಜಿನಿಯರ್ ಸಿದ್ದರಾಜ್ ಸೇರಿದಂತೆ ಗುತ್ತಿಗೆದಾರರು ಸ್ಥಳದಲ್ಲಿದ್ದು, ನಾಲೆಗೆ ಬಿದ್ದರುವ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು.
ಕುಶಾಲನಗರ: ಹಾರಂಗಿ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದ ಕಾಲುವೆ ಹಾನಿ ಆಗಿರುವ ಪ್ರದೇಶಗಳಲ್ಲಿ ತಕ್ಷಣ ಸರಿಪಡಿಸುವಂತೆ ಶಾಸಕ ಡಾ ಮಂತರ್ ಗೌಡ ಅಣೆಕಟ್ಟು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದ ಅಚ್ಚುಕಟ್ಟು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಕಾಲುವೆ ಕಾಮಗಾರಿ ಎರಡು ಕಡೆ ಕುಸಿದಿದ್ದು ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಕೂಡಲೇ ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ಡಾ ಮಂತರ್ ಗೌಡ ತಿಳಿಸಿದ್ದಾರೆ.
ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆ ಮೂಲಕ ಇತ್ತೀಚೆಗೆ ನೀರು ಹರಿಸಲಾಗಿದ್ದು ಯೋಜನಾ ವೃತ್ತದ ಕೊನೆಯ ಹಂತದ ಕಾಲುವೆ ತನಕ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಮಂತರ್ ಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಅನಾನುಕೂಲ ಉಂಟಾಗದAತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ಶಕ್ತಿಗೆ ತಿಳಿಸಿದ್ದಾರೆ.