ಶ್ರೀಮಂಗಲ, ಆ. ೪: ಕಕ್ಕಡ ಪದ್‌ನೆಟ್ಟ್ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಗರೀಕರಣ ವಿಸ್ತಾರವಾಗುತ್ತಿದ್ದಂತೆ ನಮ್ಮ ಸಂಸ್ಕೃತಿ ಮರೆತುಹೋಗಬಾರದು. ಇಂತಹ ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ಕುಟ್ಟ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ೧೦ನೇ ವರ್ಷದ ಕಕ್ಕಡ ನಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ನಮಗೆ ಈ ಹಬ್ಬದ ಮೂಲಕ ಸೇರಲು ಹಾಗೂ ಚಟುವಟಿಕೆ ನಡೆಸಲು ಅವಕಾಶವಾಗುತ್ತದೆ. ಕಳೆದ ಹತ್ತು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ. ಇತರ ಕೊಡವ ಸಮಾಜಗಳಿಗೂ ಇದು ಮಾದರಿಯಾಗಿದೆ. ಕೊಡವ ಸಮಾಜಗಳಿಗೆ ಬಿಡುಗಡೆಯಾಗಿರುವ ಹಣದಲ್ಲಿ ಶೇ. ೧೮ರಷ್ಟು ಜಿಎಸ್‌ಟಿ ತೆರಿಗೆ ಹೊರತುಪಡಿಸಿ ಬೇರೆ ಯಾವುದೇ ಹಣವನ್ನು ನೀಡಬಾರದು. ಈಗಾಗಲೇ ಕೊಡವ ಸಮಾಜಗಳ ಒಕ್ಕೂಟಕ್ಕೆ ಆರು ಕೋಟಿ ಹಾಗೂ ಭಾಗಮಂಡಲ ಕ್ಷೇತ್ರದಲ್ಲಿ ಸಮುದಾಯ ಭವನಕ್ಕೆ ಒಂದು ಕೋಟಿ ಹಣ, ಕೊಡವ ಸಮಾಜಗಳಿಗೆ ೩ ಕೋಟಿ ಅನುದಾನಕ್ಕೆ ಉಂಟಾಗಿದ್ದ ತಾಂತ್ರಿಕ ಅಡಚಣೆ ಸರಿಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ನಾವು ಪ್ರಾಮಾಣಿಕವಾಗಿ ಬದುಕಿಕೊಂಡು ಬಂದ ಜನರಾಗಿದ್ದು, ಪ್ರಪಂಚದ ಯಾವುದೇ ಕಡೆ ಹೋದರೂ ನಮಗೆ ಗೌರವವಿದೆ. ನಮ್ಮ ಮಕ್ಕಳಿಗೂ ಇದೇ ರೀತಿಯ ಗೌರವ ದೊರೆಯಬೇಕು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡುವ ಜವಾಬ್ದಾರಿ ನಮ್ಮದಾಗಿದೆ ಎಂದು ಪೊನ್ನಣ್ಣ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಹಾಗೂ ಕುಟ್ಟ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಕಳೆದ ಹತ್ತು ವರ್ಷಗಳಿಂದ ಸ್ಥಳೀಯ ಜನರಿಗೆ ಒಂದೆಡೆ ಸೇರಲು ಹಾಗೂ ಅವರ ಪ್ರತಿಭೆ ಅನಾವರಣಕ್ಕೆ ಕಕ್ಕಡ ನಮ್ಮೆ ಮೂಲಕ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯರು ಹೊಂದಿರುವ ವ್ಯಾಪಾರ, ಕರಕುಶಲ ಕಲೆ, ಆಹಾರ ತಯಾರಿಕೆ ಇತ್ಯಾದಿಗಳಿಗೆ ಪರಿಚಯಿಸುವ ವೇದಿಕೆಯಾಗಿ ಕಕ್ಕಡ ನಮ್ಮೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕಸ್ತೂರಿರಂಗನ್ ವಿಚಾರ ಮತ್ತೆ ಪ್ರಸ್ತಾಪವಾಗಿದ್ದು, ವಯನಾಡ್ ಭೂಕುಸಿತದಿಂದ ಈ ಯೋಜನೆ ಜಾರಿಗೆ ತರಲು ಪುಷ್ಠಿ ಸಿಕ್ಕಿದೆ. ಆದರೆ ಈ ಯೋಜನೆ ಜಾರಿಗೆ ಬಂದರೆ ಕೊಡಗಿಗೆ ಉಂಟಾಗುವ ಅಪಾಯದ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಕೊಡಗಿಗೆ ಅಪಾಯ ಬಂದರೆ ಹೈಕೋರ್ಟ್- ಸುಪ್ರೀಂಕೋರ್ಟ್ವರೆಗೂ ಸಹ ಕಾನೂನು ಹೋರಾಟ ನಡೆಸುವ ಆಶ್ವಾಸನೆಯನ್ನು ಪೊನ್ನಣ್ಣ ಅವರು ಈ ಹಿಂದೆ ನೀಡಿದ್ದಾರೆ ಎಂದು ಹೇಳಿದರು.

ಹಿಂದಿನ ಸರ್ಕಾರವಿದ್ದಾಗ ೧೦ ಕೋಟಿ ಅನುದಾನವನ್ನು ಕೊಡವ ಜನಾಂಗದ ಅಭಿವೃದ್ಧಿಗೆ ಮಂಜೂರು ಮಾಡಿದ್ದು, ಆದರೆ ಅದಕ್ಕೆ ತಾಂತ್ರಿಕ ಅನುಮೋದನೆ ಸಿಕ್ಕಿರಲಿಲ್ಲ ಇದೀಗ ತಾಂತ್ರಿಕ ಅನುಮೋದನೆಯನ್ನು ಈಗಿನ ಸರಕಾರದಿಂದ ಎ. ಎಸ್. ಪೊನ್ನಣ್ಣ ಅವರು ಕೊಡಿಸುವ ಮೂಲಕ ಹಣವನ್ನು ಬಿಡುಗಡೆ ಮಾಡಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಿಕುಟ್ಟಿರ ಕಾಂಚನ ಪೊನ್ನಣ್ಣ, ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೇಂಗಡ ರಮೇಶ್, ಕಾರ್ಯದರ್ಶಿ ಕೊಂಗAಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ ನಿರ್ದೇಶಕರುಗಳಾದ ಕೇಚಮಾಡ ವಾಸು ಉತ್ತಪ್ಪ, ಕೋದಂಡ ಲೀಲಾ ಕಾರ್ಯಪ್ಪ, ತೀತಿರ ಕಬೀರ್ ತಿಮ್ಮಯ್ಯ, ಚೆಪ್ಪುಡೀರ ಪಾರ್ಥ, ದಾನಿಗಳಾದ ಮುಕ್ಕಾಟಿರ ರಾಜ ಮಂದಣ್ಣ, ಚೆಕ್ಕೆರ ರಾಬಿನ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಮತ್ತು ಮಹಿಳಾ ಸಂಘದ ಪದಾಧಿಕಾರಿಗಳಾದ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ಮಚ್ಚಮಾಡ ನವ್ಯ ಪ್ರಕಾಶ್, ಕಳ್ಳಂಗಡ ಗ್ರೀಷ್ಮಾ ಅಪ್ಪಣ್ಣ, ಚೆಕ್ಕೆರ ದೇಚು ರಾಬಿನ್, ಕೋಳೆರ ಪ್ರಿಯಾ ಮನೋಜ್ ಮತ್ತಿತರರು ಹಾಜರಿದ್ದರು.

ಈ ಸಂದರ್ಭ ಸ್ಥಳೀಯರು ತೊಡಗಿಸಿಕೊಂಡಿರುವ ವ್ಯಾಪಾರ ಉದ್ದಿಮೆ, ಆಹಾರ ತಯಾರಿಕೆ, ಆಟೋಮೊಬೈಲ್ ಕ್ಷೇತ್ರದ ಪರಿಚಯ ಹಾಗೂ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನು ಮಾಡಲಾಗಿತ್ತು.

ಹೂವಿನ ಗಿಡಗಳು, ಕರಕುಶಲ ವಸ್ತುಗಳು, ಫ್ಯಾಷನ್ ಡಿಸೈನ್, ಪೇಂಟಿAಗ್, ಆಹಾರ ತಯಾರಿಕಾ ವಿಭಾಗದಲ್ಲಿ ಚಟ್ನಿ, ಉಪ್ಪಿನಕಾಯಿ, ವೈವಿಧ್ಯಮಯ ತಿನಿಸುಗಳು ಪ್ರದರ್ಶನ ಹಾಗೂ ಮಾರಾಟದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಕಲರವ ಕಕ್ಕಡ ನಮ್ಮೆಗೆ ಹಬ್ಬದ ವಾತಾವರಣ ಮೂಡಿಸಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕ್ರಮಕ್ಕೆ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. -ಅಣ್ಣೀರ ಹರೀಶ್ ಮಾದಪ್ಪ