ಅತಿ ವೇಗದ ಅರಣ್ಯೀಕರಣಕ್ಕೆ ಸಹಕರಿಸುವ ಪಲ್ಪ್ ತ್ಯಾಜ್ಯ

ಕಾಫಿ ಬೀಜದ ಸಿಪ್ಪೆಯನ್ನು ತೆಗೆಯುವ ಕಾಫಿ ಪಲ್ಪಿಂಗ್ ಪ್ರಕ್ರಿಯೆಯಿಂದ ಸೃಷ್ಟಿಯಾಗುವ ತ್ಯಾಜ್ಯವನ್ನು ಬಳಸಿ ಒಂದೂವರೆ ಚದರ ಕಿ.ಮೀ. ವ್ಯಾಪ್ತಿಯ ಪಾಳು ಬಿದ್ದಿರುವ ಕೃಷಿ ಪ್ರದೇಶವನ್ನು ಸಂಪೂರ್ಣವಾಗಿ ಅರಣ್ಯೀಕರಣಗೊಳಿಸಿದಕ್ಕೆ ಕೋಸ್ಟಾ-ರೀಕ ದೇಶದ ಸಂಶೋಧಕರು ಸಾಕ್ಷಿಯಾಗಿದ್ದಾರೆ. ೫ ವರ್ಷಗಳ ಹಿಂದೆಯೇ ಈ ಒಂದು ಸಂಶೋಧನೆ ಕೈಗೊಂಡ ವಿಜ್ಞಾನಿಗಳು ಫಲಿತಾಂಶ ನೋಡಿ ಅಚ್ಚರಿಯಾಗಿದ್ದಾರೆ.

ಪಾಳು ಬಿದ್ದಿದ್ದ ಕೃಷಿ ಭೂಮಿ ಇದೀಗ ಅರಣ್ಯ

ಒಂದೂವರೆ ಚದರ ಕಿ.ಮೀ. ವ್ಯಾಪ್ತಿಯ ಪಾಳು ಬಿದ್ದಿದ್ದ ಕೃಷಿ ಭೂಮಿಯನ್ನು ಸಂಪೂರ್ಣವಾಗಿ ಕಾಫಿ ಪಲ್ಪ್ನಿಂದ ಅರ್ಧ ಮೀಟರ್ ಎತ್ತರದವರೆಗೆ ಹರಡಿದ ಸಂಶೋಧಕರು, ೨ ವರ್ಷಗಳ ಬಳಿಕ ೨೦೨೧ರಲ್ಲಿ ಫಲಿತಾಂಶ ನೋಡಿ ಅಚ್ಚರಿಯಾದರು. ಈ ಪ್ರದೇಶವನ್ನು ದಟ್ಟ ಕಾಡು ಆವರಿಸಿತ್ತು. ವಿಶೇಷವೇನೆಂದರೆ ಸ್ಥಳೀಯ ಸಸಿಗಳೇ ಯಾವುದೇ ಪೋಷಣೆಯಿಲ್ಲದೆ ಇಲ್ಲಿ ಸಮೃದ್ಧವಾಗಿ ಬೆಳೆದಿದ್ದವು. ಇದರ ಪಕ್ಕದಲ್ಲಿಯೇ ಸ್ವಲ್ಪ ಜಾಗವನ್ನು ಸಂಶೋಧಕರು ಹಾಗೇ ಬಿಟ್ಟಿದ್ದು, ಇಲ್ಲಿ ಸ್ಥಳೀಯವಲ್ಲದ ಕಚಡ ಹುಲ್ಲುಗಳು, ಪಾರ್ಥೇನಿಯಂ ಬೆಳೆದಿದ್ದವು.

ಯಾವುದೇ ರೀತಿಯ ಸಸಿ ನಡೆಸುವ ಕಾರ್ಯ ನಡೆಸಿಲ್ಲ

ವಿಶೇಷವೇನೆಂದರೆ ಇಲ್ಲಿ ಯಾವುದೇ ರೀತಿಯ ಸಸಿ ನೆಡುವ ಕಾರ್ಯ ನಡೆದಿಲ್ಲ. ಸಂಶೋಧಕರು ಮಾಡಿದ್ದು ಇಷ್ಟೆ. ವಿಸ್ತಾರವಾದ ಜಾಗದಲ್ಲಿ ಕಾಫಿ ಪಲ್ಪ್ ಅನ್ನು ಅರ್ಧ ಮೀಟರ್ ಎತ್ತರದವರೆಗೆ ಹರಡಿದ್ದು, ಇದು ಆಕ್ರಮಣಕಾರಿ ಕಚಡ ಹುಲ್ಲಿನ ಬೆಳವಣಿಗೆಯನ್ನು ಸ್ಥಗಿತಗೊಳಿಸಿತು.

ನೈಸರ್ಗಿಕವಾಗಿ ಪ್ರಾಣಿ ಪಕ್ಷಿಗಳ ಮೂಲಕ ಹಾಗೂ ಗಾಳಿಯ ಮೂಲಕ ಪರಾಗಸ್ಪರ್ಶ ಪ್ರಕ್ರಿಯೆಯಿಂದ ಸಮೀಪದಲ್ಲಿಯೇ ಇದ್ದ ಅರಣ್ಯದಲ್ಲಿನ ಸಸಿಗಳ ಬೀಜಗಳು ತೇವಾಂಶಭರಿತ ಕಾಫಿ ಪಲ್ಪ್ ಮೇಲೆ ಹರಡಿ ಸ್ಥಳೀಯ ತಳಿಗಳ ಸಸಿಗಳು ಸಮೃದ್ಧವಾಗಿ ಬೆಳೆದು ೨ ವರ್ಷಗಳ ಅವಧಿಯಲ್ಲಿ ಅರಣ್ಯವೇ ಸೃಷ್ಟಿಯಾಗಿತ್ತು.

ಕಾಫಿ ಪಲ್ಪ್ ರಹಿತ ಪಾಳು ಭೂಮಿಯ ಪ್ರದೇಶವನ್ನು ಕಚಡ ಹುಲ್ಲು ಸೇರಿದಂತೆ ಇತರ ಮರಗಳು ೨ ವರ್ಷಗಳಲ್ಲಿ ಶೇ. ೨೦ ರಷ್ಟು ಆವರಿಸಿದ್ದರೆ, ಕಾಫಿ ಪಲ್ಪ್ ಹರಡಿದ್ದ ಭೂಮಿಯು ಸ್ಥಳೀಯ ಸಸಿಗಳಿಂದ ಶೇ. ೮೦ ರಷ್ಟು ಆವರಿತವಾಗಿತ್ತು. ಮರಗಳು ೪ ಪಟ್ಟು ಹೆಚ್ಚು ಎತ್ತರ ವಾಗಿ ಬೆಳೆದಿದ್ದು, ಇಲ್ಲಿನ ಮಣ್ಣಿನಲ್ಲಿ ಹೆಚ್ಚಿನ ಪೋಷಕಾಂಶ ಕೂಡ ಇತ್ತು ಎಂಬುದಾಗಿ ಈ ಸಂಶೋಧನೆ ಕೈಗೊಂಡ ಹವಾಯ್ ವಿಶ್ವ ವಿದ್ಯಾಲಯದ ವಿಜ್ಞಾನಿ ಡಾ. ರೆಬೆಕಾ ಕೋಲ್ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಕೃಷಿ ಬೆಳೆಗಳಲ್ಲಿನ ತ್ಯಾಜ್ಯವನ್ನು ಬಳಸಿಯೂ ಇದೇ ರೀತಿಯ ಸಂಶೋಧನೆ ನಡೆಸುವ ಅಗತ್ಯತೆ ಇರುವುದಾಗಿ ಅವರ ಅಭಿಪ್ರಾಯ.