ಶ್ರೀಮಂಗಲ, ಆ. ೪: ಮದುವೆ ಸಮಾರಂಭಗಳಿಗೆ ವೇದಿಕೆ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಗಿದ್ದ ಕೊಡವ ಸಮಾಜಗಳು ಇದೀಗ ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಅರಿವು ಮೂಡಿಸುತ್ತಿರುವುದು ಪ್ರಸಂಶನೀಯ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪೊನ್ನಂಪೇಟೆಯಲ್ಲಿ ಕೊಡವ ಹಿತಾರಕ್ಷಣಾ ಬಳಗ ಕ್ಗ್ಗಟ್ಟ್ನಾಡ್ ಪೊನ್ನಂಪೇಟೆ ಇವರ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಕಕ್ಕಡ ಪದ್ನೆಟ್ಟ್ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕೃತಿಯ ಬೇರಾಗಿರುವ ಭತ್ತದ ಕೃಷಿಯಲ್ಲಿ ನಿರಾಸಕ್ತಿ ತಾಳಿದ್ದು ಕೊಡಗಿನಲ್ಲಿ ೩೦ ಸಾವಿರ ಹೆಕ್ಟರ್ ಪ್ರದೇಶದಲ್ಲಿದ್ದ ಕೃಷಿ, ಇದೀಗ ೧೯ ಸಾವಿರ ಹೆಕ್ಟರ್ ಪ್ರದೇಶಕ್ಕೆ ಕುಸಿತವಾಗಿರುವ ವರದಿ ಅತ್ಯಂತ ಆತಂಕಕಾರಿ. ಕೊಡವ ಸಮಾಜಗಳು ಸಂಘ ಸಂಸ್ಥೆಗಳು ಕೊಡವ ಸಂಸ್ಕೃತಿಯ ಗತವೈಭವದ ಆಚರಣೆಗೆ ತರಲು ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಇದು ಸ್ವಾಗತ ಎಂದು ಹೇಳಿದ ಅವರು ಕೊಡವ ಸಮುದಾಯದಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಹಿಂದಿನ ಕಾಲದಲ್ಲಿ ಎಲ್ಲರೂ ಸೇರಿ ಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದರು. ಆದರೆ ಜನಸಂಖ್ಯೆ ಕೊರತೆಯಿಂದ ಮನೆಗಳಲ್ಲಿ ಕೆಲವರು ಇರುವುದರಿಂದ ಸಂಘ ಸಂಸ್ಥೆಗಳು ಹಾಗೂ ಕೊಡವ ಸಮಾಜಗಳು ಸಾಮೂಹಿಕವಾಗಿ ಹಬ್ಬಗಳನ್ನು ಆಚರಿಸುತ್ತಿರುವುದು ಉತ್ತಮ ಕೆಲಸ ಎಂದು ಹೇಳಿದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಪ್ರಕೃತಿಯಿಂದ ನಾವು ಆಹಾರವನ್ನು ಪಡೆಯುತ್ತೇವೆ. ಆದ್ದರಿಂದ ಪ್ರಕೃತಿಯನ್ನು ರಕ್ಷಿಸಬೇಕು ಹಾಗೂ ಪೂಜೆ ಮಾಡಬೇಕು, ಎಂದಿಗೂ ನಾಶ ಮಾಡಬಾರದು ಎಂದು ಕಿವಿಮಾತು ಹೇಳಿದರು. ಕೊಡಗಿನ ಭವಿಷ್ಯದ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕು, ಈಗಲೇ ಕೊಡವ ಜನಾಂಗದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಮುಂದೆ ಇದರ ಪರಿಣಾಮ ಏನಾಗಬಹುದೆಂದು ಗಂಭೀರವಾಗಿ ಚಿಂತಿಸಬೇಕಾಗಿದೆ. ಜನಸಂಖ್ಯೆ ಕಡಿಮೆಯಾದರೆ ಕೊಡವ ಸಂಸ್ಕೃತಿ, ಆಚಾರ - ವಿಚಾರ ಪದ್ಧತಿಗಳನ್ನು ನಡೆಸಿಕೊಂಡು ಹೋಗಲು ತೊಂದರೆಯಾಗಲಿದೆ ಎಂದರು.
ಸಾಧಕರಿಗೆ ಸನ್ಮಾನ: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಹಿರಿಯ ವೈದ್ಯಾಧಿಕಾರಿ ಡಾ. ಬಿಜ್ಜಂಡ ಕಾರ್ಯಪ್ಪ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಗ್ರೀಷ್ಮಾ ಬೋಜಮ್ಮ ಅವರುಗಳ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಹತ್ತನೇ ತರಗತಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಲಯನ್ಸ್ ಶಾಲಾ ವಿದ್ಯಾರ್ಥಿ ಕಾಟಿಮಾಡ ಭಾಷಿತ ದೇವಯ್ಯ ಹಾಗೂ ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಯಿತು.
ಸನ್ಮಾನ ಸ್ವೀಕರಿಸಿ ಡಾ. ಬಿಜ್ಜಂಡ ಕಾರ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಹಾಗೆಯೇ ವ್ಯಾಸಂಗ ಪೂರ್ಣಗೊಳಿಸಿದ ನಂತರ ಕೊಡಗಿನಲ್ಲಿಯೂ ಸೇವೆ ಮಾಡಬೇಕು. ತಂದೆ ತಾಯಿ ನಿರೀಕ್ಷೆಯಂತೆ ಜಾಗ ಉಳಿಸಿಕೊಂಡು ಕೊಡಗಿನ ಬಗ್ಗೆ ಕಾಳಜಿ ವಹಿಸಬೇಕು. ಕೊಡವ ಸಮುದಾಯದ ಜನಸಂಖ್ಯೆಯ ಬಗ್ಗೆಯೂ ಜಾಗೃತಿ ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಮುಕ್ಕಾಟಿರ ಗ್ರೀಷ್ಮಾ ಬೋಜಮ್ಮ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಹಿತಾರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರು ಕೊಡಗಿನಲ್ಲಿ ಅಂಬಲಗಳು ನ್ಯಾಯ ತೀರ್ಮಾನದ ಕೇಂದ್ರಗಳಾಗಿದ್ದವು. ಅವುಗಳು ಇದ್ದರೆ ಊರಿಗೆ ಒಳಿತಾಗುತ್ತದೆ. ಹಾಗೆಯೇ ಮಂದ್ಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳಾಗಿದ್ದು, ಅವುಗಳು ಉಳಿದರೆ ನಾಡಿಗೆ ಒಳಿತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸಮಯದಲ್ಲಿ ಕೊಡವ ಜನಾಂಗದ ಸಂಸ್ಕೃತಿ ನಾಡು, ನುಡಿ, ನೆಲ - ಜಲದ ಹಿತರಕ್ಷಣೆಗೆ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಪಟ್ಟೋಲೆ ಪಳಮೆ ಕೃತಿಗೆ ನೂರು ವರ್ಷ
ನಡಿಕೇರಿಯಂಡ ಚಿಣ್ಣಪ್ಪ ಅವರು ಬರೆದಿರುವ ಕೊಡವರ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಲೆ ಪಳಮೆ ಕೃತಿ ರಚನೆಯಾಗಿ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆ ಕಾರ್ಯಕ್ರಮ ನಡೆದ ವೇದಿಕೆಗೆ ಕೃತಿಯ ಹೆಸರಿಟ್ಟು ನಡಿಕೇರಿಯಂಡ ಚಿಣ್ಣಪ್ಪ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭ ಚಿಣ್ಣಪ್ಪ ಅವರನ್ನು ನೆನೆದ ಚಿರಿಯಪಂಡ ರಾಜಾ ನಂಜಪ್ಪ ಅವರು ಕೊಡವ ಭಗವದ್ಗೀತೆ ಆಗಿರುವ ಪಟ್ಟೋಲೆ ಪಳಮೆಗೆ ೧೦೦ ವರ್ಷವಾಗಿರುವ ಸಂದರ್ಭದಲ್ಲಿ ಮರು ಮುದ್ರಣಗೊಳಿಸಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭ ಹಿತರಕ್ಷಣಾ ಬಳಗದ ಅಧ್ಯಕ್ಷರಾಗಿದ್ದ ಕಾಯಪಂಡ ಸನ್ನಿ ಬೋಪಣ್ಣ ಅವರ ನಿಧನಕ್ಕೆ ಮೌನಚರಣೆ ಮಾಡಲಾಯಿತು.
ವೇದಿಕೆಯಲ್ಲಿ ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್ ಹಾಜರಿದ್ದರು. ಚೆಟ್ಟಂಗಡ ಲೇಖನ ಪ್ರಾರ್ಥಿಸಿ, ರಾಜಾ ನಂಜಪ್ಪ ಸ್ವಾಗತಿಸಿದರು. ಸನ್ಮಾನಿತರ ಪರಿಚಯವನ್ನು ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಗೂ ಬಲ್ಲಡಿಚಂಡ ಕಸ್ತೂರಿ ಮಾಡಿದರು. ಉಳುವಂಗಡ ಲೋಹಿತ್ ಭೀಮಯ್ಯ ನಿರೂಪಿಸಿ, ಬೋಡಂಗಡ ಜಗದೀಶ್ ವಂದಿಸಿದರು.
ಮAದತವ್ವ ತಂಡದಿAದ ಗೆಜ್ಜೆತಂಡ್ ನೃತ್ಯ ಯಂಗ ಕಲರಂಗ ತಂಡದಿAದ ಕೊಡವ ಕಿರುನಾಟಕ ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದೇ ಸಂದರ್ಭ ಕಟ್ಟಡ ೧೮ರ ವಿಶೇಷ ಸಾಂಪ್ರದಾಯಿಕ ಊಟೋಪಚಾರ ವ್ಯವಸ್ಥೆ ಮಾಡಲಾಗಿತ್ತು. -ಅಣ್ಣೀರ ಹರೀಶ್ ಮಾದಪ್ಪ