ಸೋಮವಾರಪೇಟೆ, ಆ. ೪: ಭಾರೀ ಮಳೆ ಗಾಳಿಗೆ ವಿದ್ಯುತ್ ಸಮಸ್ಯೆ ಎದುರಾಗಿರುವುದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಇಂದಿಗೂ ಸಹಜ ಸ್ಥಿತಿಗೆ ಬಂದಿಲ್ಲ. ಗಾಳಿಗೆ ಅನೇಕ ಮರಗಳು ಬಿದ್ದು, ವಿದ್ಯುತ್ ಕಂಬ, ತಂತಿಗಳು ಹಾಳಾಗಿದ್ದು, ಸೆಸ್ಕ್ನಿಂದ ಸಮಾರೋಪಾದಿ ಕೆಲಸ ನಡೆಯುತ್ತಿದೆ.

ಶೇ. ೮೦ ಭಾಗಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಒದಗಿಸಲಾಗಿದ್ದು, ಹಲವಷ್ಟು ಗ್ರಾಮಗಳು ೨೦ ದಿನಗಳ ನಂತರ ಬೆಳಕು ಕಾಣುತ್ತಿವೆ. ಆದರೆ ಕುಡಿಯುವ ನೀರಿನ ಸಮಸ್ಯೆಗೆ ಇಂದಿಗೂ ಮುಕ್ತಿ ದೊರಕಿಸಲು ಸಾಧ್ಯವಾಗಿಲ್ಲ. ವಿದ್ಯುತ್ ಇಲ್ಲದ ಸಂದರ್ಭ ಮೋಟಾರ್‌ಗಳು ಕೆಲಸ ಮಾಡದೇ ಹಲವಷ್ಟು ಭಾಗಗಳಲ್ಲಿ ದುರಸ್ತಿಗೀಡಾಗಿವೆ.

ಅವುಗಳನ್ನು ಸರಿಪಡಿಸುವ ಕೆಲಸವೂ ಪ್ರಗತಿಯಲ್ಲಿದೆ. ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಕಟ್ಟೆ ಭಾಗದಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಳೆ ಬೀಳುತ್ತಿದ್ದ ಸಂದರ್ಭ ಅದನ್ನೇ ಸಂಗ್ರಹಿಸಿ ಉಪಯೋಗಿಸಲಾಗುತ್ತಿತ್ತು. ಇದೀಗ ಮಳೆಯೂ ಕಡಿಮೆಯಾಗಿದ್ದು, ದಿನ ಬಳಕೆಗೆ ನೀರಿನ ಕೊರತೆ ಉಂಟಾಗಿದೆ. ಇದರೊಂದಿಗೆ ಬೋರ್‌ವೆಲ್‌ನ ಮೋಟಾರ್ ಕೆಟ್ಟಿರುವುದರಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಪರಿಣಾಮ ಬೆಟ್ಟಗುಡ್ಡಗಳಿಂದ ನೈಸರ್ಗಿಕವಾಗಿ ಬರುವ ಜಲದ ನೀರನ್ನು ಗ್ರಾಮಸ್ಥರು ಉಪಯೋಗಿಸುತ್ತಿದ್ದಾರೆ. ಬಸವನಕಟ್ಟೆ ಗ್ರಾಮದ ಮೇಲ್ಭಾಗದಲ್ಲಿ ಕಾಫಿ ತೋಟ, ಗುಡ್ಡ ಇರುವುದರಿಂದ ಯಥೇಚ್ಛ ನೀರು ಹರಿದುಬರುತ್ತಿದೆ. ಶಾಂತಳ್ಳಿ ಹೋಬಳಿಯ ಅನೇಕ ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ೨೦೦ ಇಂಚಿಗೂ ಅಧಿಕ ಮಳೆಯಾಗಿದ್ದು, ಎಲ್ಲೆಲ್ಲೂ ಜಲದ ಒರತೆ ಕಂಡುಬರುತ್ತಿದೆ. ಇಂತಹ ಜಲದ ಒರತೆಗೆ ಬಾಳೆ ದಿಂಡನ್ನು ಅಳವಡಿಸಿ ನೈಸರ್ಗಿಕವಾಗಿ ಬರುವ ನೀರನ್ನು ಸಂಗ್ರಹಿಸಿ ಮನೆಯ ಉಪಯೋಗಕ್ಕೆ, ಕುಡಿಯಲು ಬಳಸಲಾಗುತ್ತಿದೆ.