ಸುಂಟಿಕೊಪ್ಪ, ಆ. ೪: ನಾಕೂರು ಸಮೀಪದ ಮಂಜಿಕೆರೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದ ಪ್ರಯೋಜನವನ್ನು ನೂರಾರು ಮಂದಿ ಪಡೆದುಕೊಂಡರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಸಂಸ್ಥೆ ಹಾಗೂ ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಸಹಯೋಗದೊಂದಿಗೆ ಮಂಜಿಕೆರೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಜ್ಞಾನ ವಿಕಾಸ ಸಂಸ್ಥೆಯ ಮೇಲ್ವಿಚಾರಕಿ, ಸಮನ್ವಯಾಧಿಕಾರಿ ಮಾಲಿನಿ ಚಾಲನೆ ನೀಡಿದರು.

ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಮುಖ್ಯಸ್ಥ ಜಲೀಲ್ ಮಾತನಾಡಿ, ಮಾನವರ ದೇಹದ ಅಂಗಗಳಲ್ಲಿ ಕಣ್ಣು ಮಹತ್ವದಾಗಿರುತ್ತದೆ. ಅದ್ದರಿಂದ ಕಾಲ ಕಾಲಕ್ಕೆ ಕಣ್ಣಿನ ಪರೀಕ್ಷೆಯನ್ನು ನಡೆಸುವ ಮೂಲಕ ವೈದ್ಯರಿಂದ ಕಣ್ಣಿನ ದೃಷ್ಟಿಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಸೂಕ್ತ. ಮಾನವರು ಲವಲವಿಕೆಯಿಂದ ಇರಬೇಕಾದರೆ ಸ್ವಚ್ಛಂದವಾಗಿ ತಮ್ಮ ಕಾರ್ಯವನ್ನು ತಾವೇ ಕಾರ್ಯನಿರ್ವಹಿಸಬೇಕಾದರೆ, ಕಣ್ಣು ದೃಷ್ಟಿ ಅವಶ್ಯಕವಾಗಿರುತ್ತದೆ. ಪ್ರತಿಯೊಬ್ಬರು ಕಣ್ಣಿನ ಬಗ್ಗೆ ನಿರಾಸಕ್ತಿ ತೋರಬಾರದೆಂದು ಅವರು ಕಿವಿಮಾತು ಹೇಳಿದರು.

ಈ ಶಿಬಿರದಲ್ಲಿ ೧೨೫ಕ್ಕೂ ಹೆಚ್ಚಿನ ಮಂದಿ ಕಣ್ಣಿನ ತಪಾಸಣೆಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸೇವಾ ಪ್ರತಿನಿಧಿ ಯಶೋಧ ಬಸವರಾಜ್, ಒಕ್ಕೂಟದ ಕಾರ್ಯದರ್ಶಿ ಮುತ್ತು, ಸ್ಪಷ್ಟ ದೃಷ್ಟಿ ಪ್ರಕಾರ ಭವಿಷ್ಯ ಸಂಸ್ಥೆಯ ಸಿಬ್ಬಂದಿ ಇದ್ದರು.