ಶನಿವಾರಸಂತೆ, ಆ. ೪: ದೇಶದ ಗಡಿ ಕಾಯುವ ಯೋಧರ ಜವಾಬ್ದಾರಿ ವರ್ಣಿಸಲಸಾಧ್ಯವಾದದ್ದು. ಯುದ್ಧ ಮಾಡುತ್ತಾ, ಹೋರಾಡುವ ಯೋಧರಿಗೆ ಎಷ್ಟು ತಾಳ್ಮೆ ಇದ್ದರೂ ಸಾಲದು ಎಂದು ಯೋಧ ಕಿರಿ ಬಿಳಾಹ ಗ್ರಾಮದ ಕರುಣಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಸೇನೆಯಲ್ಲಿ (ಬಿ.ಎಸ್.ಎಫ್.) ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ ಕರುಣಾಕರ್ (ಮಂಜು) ಶನಿವಾರಸಂತೆ ಹಿಂದೂ ಜಾಗರಣಾ ವೇದಿಕೆ ಹಾಗೂ ಶನಿವಾರಸಂತೆ- ಕೊಡ್ಲಿಪೇಟೆ ಸಾರ್ವಜನಿಕರ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮವಸ್ತ್ರ ಧರಿಸಿದ ಸೈನಿಕ ಸ್ವತಃ ಜವಾಬ್ದಾರಿ ಅರಿತು ೨೪ ಗಂಟೆಗಳ ಕಾಲವೂ ಕರ್ತವ್ಯನಿರತನಾಗಿರುತ್ತಾನೆ. ಪ್ರತಿಯೊಂದು ಕುಟುಂಬವೂ ದೇಶ ಸೇವೆಗಾಗಿ ಸೈನಿಕರನ್ನು ಕೊಡುಗೆಯಾಗಿ ನೀಡಬೇಕು ಎಂದು ನುಡಿದರು.
ಬಿಜೆಪಿ ಮುಖಂಡ ಎಸ್.ಎನ್.ರಘು ಹಾಗೂ ಬಿ.ಎಸ್. ಅನಂತಕುಮಾರ್ ಮಾತನಾಡಿದರು. ಹಿಂದೂ ಜಾಗರಣಾ ವೇದಿಕೆ ಪ್ರಮುಖರಾದ ಸೊಮಶೇಖರ್ ಪೂಜಾರಿ, ತಾಳೂರು ಪುನೀತ್, ಬಿಳಾಹ ದಿನೇಶ್, ಸೋಮವಾರಪೇಟೆ ಸುಭಾಶ್, ನೂರಾರು ಕಾರ್ಯಕರ್ತರು, ನಿವೃತ್ತ ಸೈನಿಕರ ಸಂಘದ ಸದಸ್ಯರು, ಯೋಧ ಕರುಣಾಕರ್ ತಂದೆ ಶಂಕರಪ್ಪ, ತಾಯಿ ಪಾರ್ವತಮ್ಮ, ಪತ್ನಿ ರೀನಾ, ಮಕ್ಕಳು,ಕಿರಿಬಿಳಾಹ ಗ್ರಾಮಸ್ಥರು ಹಾಜರಿದ್ದರು. ಶಿಕ್ಷಕ ಕೆ.ಪಿ.ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಕ್ಕೂ ಮೊದಲು ಯೋಧ ಕರುಣಾಕರ್ ಅವರನ್ನು ಗುಡುಗಳಲೆ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ಸ್ವಾಗತಿಸಿ, ಶನಿವಾರಸಂತೆ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಪೊಲೀಸ್ ವೃತ್ತ ನಿರೀಕ್ಷಕ ಪ್ರೀತಮ್, ಪಿಎಸ್‌ಐ ಗೋವಿಂದ್ ರಾಜ್, ಸಿಬ್ಬಂದಿ ಹಾಜರಿದ್ದರು.