ಸೋಮವಾರಪೇಟೆ, ಆ. ೪: ಇಲ್ಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯ ಚಾವಡಿಮನೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದರು.
ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು.
ಬೆಂಗಳೂರು ಯಲಹಂಕ ವಿದ್ಯಾರಣ್ಯಪುರ ಲಯನ್ಸ್ ಕ್ಲಬ್ ಎಂ.ಸಿ.ಸಿ. ರಾಜಶೇಖರಯ್ಯ ಅವರು ನೂತನ ಸಾಲಿನ ಅಧ್ಯಕ್ಷ ಸಿ.ಕೆ. ಶಿವಕುಮಾರ್, ಕಾರ್ಯದರ್ಶಿ ಪದ್ಮಾಕರ್ ರಾಜೇ ಅರಸ್, ಖಜಾಂಚಿ ಜಗತ್ ಪ್ರಧಾನ್ ಮತ್ತು ಸಮಿತಿ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು, ಲಯನ್ಸ್ ಸಂಸ್ಥೆ ಕಳೆದ ೧೦೭ ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವಕಾಶವಂಚಿತರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಾ ಬರುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಸದಸ್ಯರ ದುಡಿಮೆಯ ಒಂದು ಭಾಗವನ್ನು ಸೇವೆಗೆ ನೀಡುತ್ತಾ ಬರಲಾಗಿದೆ. ನಾವು ಇದ್ದಷ್ಟು ದಿನ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸೇವೆ ಮಾಡಿದಲ್ಲಿ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ನೆನೆಯುತ್ತದೆ. ಕೇವಲ ನಮ್ಮ ಬದುಕಿಗಾಗಿ ಜೀವನ ನಡೆಸಿದಲ್ಲಿ ಯಾವುದೇ ಪ್ರಯೋಜನ ಇರುವುದಿಲ್ಲ ಎಂದು ಹೇಳಿದರು.
ನೂತನ ಸಾಲಿನ ಅಧಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಿ.ಕೆ. ಶಿವಕುಮಾರ್ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಸಮಾಜದಲ್ಲಿನ ಗುರುತರ ಸಮಸ್ಯೆಗಳನ್ನು ಬಗೆಹರಿಸಿ, ಅತ್ಯವಶ್ಯಕ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ಸಂಸ್ಥೆಯ ಎಲ್ಲ ಸದಸ್ಯರು ಎಲ್ಲ ಕಾರ್ಯ ಚಟುವಟಿಕೆಗಳಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ಲಿಯೋ ಕ್ಲಬ್‌ನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಪ್ರತೀಕ್ಷ, ಕಾರ್ಯದರ್ಶಿಯಾಗಿ ಜೀವಿತ, ಖಜಾಂಚಿಯಾಗಿ ಇಬ್ಬನಿಗೌಡ ಆಯ್ಕೆಯಾದರು. ಇವರೊಂದಿಗೆ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು. ವೇದಿಕೆಯಲ್ಲಿ ಪ್ರಾಂತೀಯ ಅಧ್ಯಕ್ಷೆ ಕನ್ನಿಕಾ ಅಯ್ಯಪ್ಪ, ವಲಯ ಅಧ್ಯಕ್ಷ ಮಹದೇವಪ್ಪ, ನಿಕಟಪೂರ್ವ ಅಧ್ಯಕ್ಷ ಎ.ಎಸ್. ಮಹೇಶ್, ಖಜಾಂಚಿ ವೀರಪ್ಪ ಇದ್ದರು.