ಸೋಮವಾರಪೇಟೆ, ಆ. ೨೮: ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು, ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶ ಗಳಲ್ಲಿ ಮದ್ಯ ಮಾರಾಟ ಹಾವಳಿ ಮಿತಿಮೀರಿದೆ ಎಂದು ಪೊಲೀಸ್ ಠಾಣೆಯಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಪ್ರಮುಖರು ಆರೋಪಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆ ಸೋಮವಾರಪೇಟೆ ಆರಕ್ಷಕ ನಿರೀಕ್ಷಕರಾದ ಮುದ್ದು ಮಾದೇವ ಅವರ ಅಧ್ಯಕ್ಷತೆಯಲ್ಲಿ, ಪೊಲೀಸ್ ಠಾಣೆಯಲ್ಲಿ ನಡೆಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಂದಿ ಹೆಚ್ಚು ನೆಲೆಸಿರುವ ಪ್ರದೇಶದಲ್ಲಿ, ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಅನಿವಾರ್ಯತೆಯಿದೆ ಎಂದು ಕುಂಬೂರು ಗ್ರಾಮದ ಸೋಮಪ್ಪ ಹೇಳಿದರು.

ಮಾದಾಪುರದ ಕೆಲವೊಂದು ಭಾಗದಲ್ಲಿ ಕಳ್ಳಭಟ್ಟಿ ಸಾರಾಯಿ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಮಾದಾಪುರ ಉಪ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ರಾತ್ರಿ ವೇಳೆ ಪೊಲೀಸ್ ಗಸ್ತು ಇಲ್ಲವಾಗಿದೆ. ಪ್ರಮುಖವಾಗಿ ಮಾದಾಪುರ ಮುಖ್ಯ ರಸ್ತೆಯಲ್ಲಿರುವ ಹೊಸತೋಟದ ಬಳಿ ಸಿ.ಸಿ. ಕ್ಯಾಮರಾ ಅಳವಡಿಸ ಬೇಕೆಂದು ಗಮನ ಸೆಳೆದರು.

ಪಟ್ಟಣ ಪಂಚಾಯಿತಿ ಸದಸ್ಯೆ ಮೋಹಿನಿ ಮಾತನಾಡಿ, ನಗರದ ವಲ್ಲಭಬಾಯಿ ರಸ್ತೆಯ ಜಂಕ್ಷನ್‌ನಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು. ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆ ಆತಂಕದಿAದ ದಿನ ದೂಡುವಂತಾಗಿದೆ. ಬಾಣಾವರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಬಸ್ ನಿಲ್ದಾಣದ ಒಳಗೆ ಮದ್ಯ ಸೇವಿಸಿ ಕೆಲ ಪುಂಡರು ನಿರಂತರವಾಗಿ ಮೋಜು ಮಸ್ತಿ ಮಾಡುತ್ತಿರುತ್ತಾರೆ. ಗಾಂಜಾ ಸೇವನೆ ಹೆಚ್ಚುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು. ಸೋಮವಾರದ ಸಂತೆ ದಿನದಂದು ಪಟ್ಟಣದಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದೆ. ಕೆಲವರಂತೂ ಜನರಿಂದ ಬಲವಂತವಾಗಿ ಹಣ ಕೀಳುವುದು, ಕೆಟ್ಟ ಪದಗಳಿಂದ ನಿಂದಿಸುವುದು, ಅಸಭ್ಯವಾಗಿ ವರ್ತಿಸುವುದು, ಮದ್ಯ ಸೇವಿಸಿ ಗಲಾಟೆ ಮಾಡುವುದು, ಪಾದಚಾರಿಗಳಿಂದ ಹಣ ಕಸಿಯುತ್ತಿದ್ದಾರೆ. ಇದರಿಂದಾಗಿ ಜನರಿಗೆ ಕಿರಿಕಿರಿ ಉಂಟಾಗಿದೆ. ಇಲಾಖೆ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಜಯಪ್ಪ ಹಾನಗಲ್ ಮನವಿ ಮಾಡಿದರು. ತೋಳೂರುಶೆಟ್ಟಳ್ಳಿ ಸುರೇಶ್ ಮಾತನಾಡಿ, ಠಾಣಾಧಿಕಾರಿಗಳು ದಲಿತ ಕೇರಿಗಳಿಗೆ ಭೇಟಿ ನೀಡಿ ಇಲಾಖೆಗೆ ಸಂಬAಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಹಿಂದೆ ನಡೆದ ಕುಂದುಕೊರತೆ ಸಭೆಯಲ್ಲಿ ಮುಖಂಡರಿAದ ಅಹವಾಲುಗಳು ಬಂದಿದ್ದು, ಬಹುತೇಕ ಅಹವಾಲುಗಳಿಗೆ ಸ್ಪಂದನ ಮಾಡಲಾಗಿದೆ. ಶೇ. ೮೦ ರಷ್ಟು ಕೆಲಸ ಇಲಾಖೆಯಿಂದ ಕಾರ್ಯಗತಗೊಂಡಿವೆ ಎಂದು ಠಾಣಾಧಿಕಾರಿ ಮುದ್ದು ಮಾದೇವ ತಿಳಿಸಿದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯಿತ್ತರು. ಸಭೆಯಲ್ಲಿ ಪ್ರಮುಖರಾದ ಹೊನ್ನಪ್ಪ, ಉಮೇಶ್, ಜಯೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.