ಮುಳ್ಳೂರು, ಆ. ೨೮: ಸಮೀಪದ ಶನಿವಾರಸಂತೆ ಶತಮಾನ ದಾಟಿದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೭೮ನೇ ಸ್ವಾತಂತ್ರö್ಯ ದಿನವನ್ನು ಸದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ‘ಬೈಕ್ ಬುಡ್ಡಿಸ್’ ಸಮಾಜ ಸೇವಾ ಸಂಸ್ಥೆ ವತಿಯಿಂದ ಆಚರಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಬೈಕ್ ಬುಡ್ಡಿಸ್ ಸಂಸ್ಥೆ ಸೇರಿಕೊಂಡು ಶಾಲೆಯ ಆಟದ ಮೈದಾನದ ಪ್ರವೇಶ ದ್ವಾರದಲ್ಲಿ ನಿರ್ಮಿಸಿರುವ ಗೇಟ್ ಅನ್ನು ಉದ್ಘಾಟಿಸಿ ಶಾಲಾ ಸುಪರ್ದಿಗೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಬೈಕ್ ಬುಡ್ಡಿಸ್ ಸಂಸ್ಥೆಯ ಸ್ಥಾಪಕ ಸತೀಶ್ ಮಾತನಾಡಿ, ವಿದ್ಯಾಭ್ಯಾಸ ಮಾಡಿದ ಶಾಲೆಗಳಿಗೆ ಮತ್ತು ಸರಕಾರಿ ಶಾಲೆಗಳ ಉಳಿವಿಗಾಗಿ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಹತ್ತು ವರ್ಷದ ಹಿಂದೆ ನಾವು ಬೈಕ್ ಬುಡ್ಡಿಸ್ ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಲಾಯಿತು ಎಂದರು.

ಸಂಸ್ಥೆಯ ಸದಸ್ಯ ಮತ್ತು ವಕೀಲ ಎಸ್.ವಿ. ಜಗದೀಶ್ ಮಾತನಾಡಿ, ಸದರಿ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಯಾಗಿದ್ದು ಬೈಕ್ ಬುಡ್ಡಿಸ್ ಸಂಸ್ಥೆಯವರು ನನ್ನನ್ನು ಸಂಪರ್ಕಿಸಿ ಈ ವರ್ಷ ಕೊಡುಗೆ ನೀಡಲು ಶಾಲೆಯನ್ನು ಆಯ್ಕೆ ಮಾಡುವಂತೆ ಹೇಳಿದ್ದರು ಅದರಂತೆ ಸದರಿ ಶಾಲೆಯನ್ನು ಆಯ್ಕೆ ಮಾಡಿದೆ ಅದರಂತೆ ಸಂಸ್ಥೆ ಕಡೆಯಿಂದ ಆಟದ ಮೈದಾನಕ್ಕೆ ಗೇಟ್ ನಿರ್ಮಿಸಿಕೊಟ್ಟಿದ್ದಾರೆ ಎಂದರು. ಶನಿವಾರಸಂತೆ ಗ್ರಾ.ಪಂ. ಸದಸ್ಯ ಶರತ್‌ಶೇಖರ್ ಮಾತನಾಡಿ, ಬೈಕ್ ಬುಡ್ಡಿಸ್ ಸಮಾಜ ಸೇವಾ ಸಂಸ್ಥೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಶಾಲೆಗಳಿಗೆ ಕೊಡಗೆಯನ್ನು ನೀಡುತ್ತಿರುವುದು ಮತ್ತು ನಮ್ಮ ಊರಿನ ಸರಕಾರಿ ಶಾಲೆಗೆ ಗೇಟ್ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಬೈಕ್ ಬುಡ್ಡಿಸ್ ಸಂಸ್ಥೆಯ ನಂದಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಗೀತ ಹರೀಶ್, ಸದಸ್ಯರಾದ ಮಧು, ಸರೋಜ ಶೇಖರ್, ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ ಶಿಕ್ಷಕ ಕೆ.ಪಿ. ಜಯಕುಮಾರ್, ಸಿಆರ್‌ಪಿ ಸಿ.ಕೆ. ದಿನೇಶ್, ಎಸ್‌ಡಿಎಂಸಿ ಅಧ್ಯಕ್ಷ ಶರಣ್, ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಮಹೇಶ್ ಪ್ರಮುಖರಾದ ರವಿ, ಪ್ರೇಮ್‌ಕುಮಾರ್ ಮುಂತಾದವರು ಹಾಜರಿದ್ದರು.