ಚೆಯ್ಯಂಡಾಣೆ, ಆ. ೨೮: ಎದುರುಗಡೆಯಿಂದ ಬಂದ ವಾಹನಕ್ಕೆ ದಾರಿ ಬಿಟ್ಟುಕೊಡುವ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕಅಪ್ ವಾಹನವೊಂದು ಸೇತುವೆಗೆ ಡಿಕ್ಕಿಯಾದ ಘಟನೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ನಡೆದಿದೆ.

ಕಡಂಗ ಮಾರ್ಗವಾಗಿ ಬಾವಲಿ, ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಎಡಪಾಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಮೀಪದ ಪೊಯಕರೆ ಸೇತುವೆ ಬಳಿ ಎದುರು ಭಾಗದಿಂದ ಬಂದ ವಾಹನಕ್ಕೆ ದಾರಿಕೊಡುವ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಪಿಕ್‌ಅಪ್ ಜೀಪ್ ಸೇತುವೆಗೆ ಡಿಕ್ಕಿಯಾಗಿದೆ. ಜೀಪಿಗೆ ಹಾನಿಯಾಗಿದ್ದು, ಜೀಪಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ರಸ್ತೆಯ ಎರಡು ಬದಿಯಲ್ಲಿ ಚರಂಡಿಯ ಮಣ್ಣು ತೆಗೆದು ರಸ್ತೆಯಲ್ಲಿ ಹಾಕಿದ್ದು, ಚೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬವನ್ನು ಚರಂಡಿಯಲ್ಲಿ ಹಾಕಿ ಚರಂಡಿಯಲ್ಲಿ ಹರಿಯಬೇಕಾಗಿದ್ದ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಅಲ್ಲದೆ ರಸ್ತೆಯ ಬದಿಗಳಲ್ಲಿ ಕಲ್ಲು, ಸೌದೆ, ಮತ್ತಿತರ ವಸ್ತುಗಳನ್ನು ಕೆಲವರು ಇಡುತ್ತಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿ ಈ ಭಾಗದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪ್ರತಿ ದಿನ ಈ ರಸ್ತೆ ಮಾರ್ಗವಾಗಿ ೧೫ಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನ ಹಾಗೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೂಡಲೇ ಎಚ್ಚೆತ್ತುಕೊಂಡು ಮುಂದೆ ಅನಾಹುತ ಸಂಭವಿಸದAತೆ ಸಂಬAಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಇಲಾಖೆ ಚರಂಡಿಯ ಮಣ್ಣನ್ನು ತೆರವುಗೊಳಿಸಿ, ರಸ್ತೆಯ ಬದಿಯಲ್ಲಿಡುತ್ತಿರುವ ವಸ್ತುಗಳನ್ನು ಸ್ಥಳಾಂತರಿಸಬೇಕು ಹಾಗೂ ಚೆಸ್ಕಾಂ ಇಲಾಖೆ ಚರಂಡಿಯಲ್ಲಿ ಹಾಕಿದ ವಿದ್ಯುತ್ ಕಂಬವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.