ಶನಿವಾರಸಂತೆ, ಆ. ೨೮: ವಲಸೆ ಕಾರ್ಮಿಕರಾದ ಅಸ್ಸಾಂ ಮೂಲದವರು ಮತ್ತು ಅಕ್ರಮವಾಗಿ ಭಾರತಕ್ಕೆ ನುಸುಳಿರುವ ಬಾಂಗ್ಲಾ ದೇಶದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇವರುಗಳಿಂದ ಸುತ್ತಮುತ್ತ ನಡೆಯುವ ಸಂತೆಗಳಲ್ಲೂ ಗುಟ್ಕಾ ವ್ಯಾಪಾರವೂ ಹೆಚ್ಚಾಗುತ್ತಿದೆ. ಇವರು ಮದ್ಯಪಾನ ಮಾಡಿ ಮಧ್ಯರಾತ್ರಿ ಬೀದಿಬೀದಿ ತಿರುಗುತ್ತಿದ್ದು ಸ್ಥಳೀಯ ನಾಗರಿಕರು ಭಯದಿಂದ ದಿನ ಕಳೆಯುವಂತಾಗಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಕೊಡ್ಲಿಪೇಟೆ ಹೋಬಳಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಐಜಿಪಿ ಡಾ. ಎಂ.ಬಿ. ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸ ಲಾಯಿತು. ಕೊಡ್ಲಿಪೇಟೆ ವಿದ್ಯಾಸಂಸ್ಥೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಡಿಐಜಿ ಡಾ. ಎಂ.ಬಿ. ಬೋರಲಿಂಗಯ್ಯ ಅವರನ್ನು ಭೇಟಿಯಾದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಕೆ.ಟಿ. ಅನಿಲ್, ಕೆ.ಎ. ನಾಗೇಶ್, ಅನುಜ್, ಅವಿನಾಶ್, ಪ್ರತಾಪ್, ಸಚಿನ್, ಡಿ. ದಯಾನಂದ್, ಇತರ ಕಾರ್ಯಕರ್ತರು ಮನವಿಯಲ್ಲಿ, ಅಸ್ಸಾಂ ಮತ್ತು ಬಾಂಗ್ಲಾ ದೇಶದ ವಲಸೆ ಕಾರ್ಮಿಕರ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಿ, ಅವರು ಕೆಲಸ ಮಾಡುವ ಎಸ್ಟೇಟ್, ಮಾಲೀಕರ ಜವಾಬ್ದಾರಿ, ಜತೆಗೆ ಸ್ಥಳೀಯ ಪೊಲೀಸ್ ಠಾಣೆ ಮತ್ತು ಗ್ರಾಮ ಪಂಚಾಯಿತಿಗೆ ಭಾವಚಿತ್ರ ಸಹಿತ ದಾಖಲೆ ನೀಡಬೇಕು ಎಂದು ಆಗ್ರಹಿಸಿದರು. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಹಾಗೂ ಇತರರು ಇದ್ದರು.