ಚೆಯ್ಯಂಡಾಣೆ, ಆ. ೨೮: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹೇಳಿದರು. ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಕಳೆದ ಐದು ದಿನಗಳಿಂದ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುವುದರಿಂದ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಹೊರಬರಲು ಸಾಧ್ಯ ಎಂದರು. ತಾ.೧೯ ರಿಂದ ಆರಂಭ ಗೊಂಡ ಕ್ರೀಡಾಕೂಟ ತಾ.೨೩ ರವರೆಗೆ ನಡೆಯಿತು. ಕ್ರೀಡಾಕೂಟದಲ್ಲಿ ಭಾರದ ಗುಂಡು ಎಸೆತ, ಡಿಸ್ಕಸ್ ಥ್ರೋ, ಉದ್ದ ಜಿಗಿತ, ಅಗಲ ಜಿಗಿತ, ೧೦೦ ಮೀಟರ್, ೨೦೦ ಮೀಟರ್, ೮೦೦ ಮೀಟರ್, ೧೫೦೦ ಮೀಟರ್ ಹಾಗೂ ರಿಲೇ ಓಟ ಸ್ಪರ್ಧೆ ನಡೆಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಈ ಸಂದರ್ಭ ನರಿಯಂದಡ ಕೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಬಿದ್ದಂಡ ರಾಜೇಶ್ ಅಚ್ಚಯ್ಯ, ನಿವೃತ್ತ ಸೈನಿಕ ಹಾಗೂ ಹಾಕಿ ಕೂರ್ಗ್ ತೀರ್ಪುಗಾರ ಚೆಯ್ಯಂಡ ಲವ ಅಪ್ಪಚ್ಚು, ಮುಖ್ಯ ಶಿಕ್ಷಕಿ ಭವ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಬಿ. ಪೊನ್ನಪ್ಪ, ಸುನಿಲ್, ಬೋಪಣ್ಣ, ರವೀಂದ್ರನಾಥ್, ರಾಜಕುಮಾರ್, ಶಿಕ್ಷಕಿಯರಾದ ಸುನಿತಾ, ಹೇಮಾಮಾಲಿನಿ, ಮಮತಾ ನಾಪೋಕ್ಲು ವಲಯ ವ್ಯಾಪ್ತಿಯ ೧೩ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಹಾಜರಿದ್ದರು.