ಸೋಮವಾರಪೇಟೆ, ಆ. ೨೮: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು ಆಡಳಿತ ಮಂಡಳಿಯಿಲ್ಲದೇ ಕಳೆದ ೧೫ ತಿಂಗಳುಗಳಿAದ ಅನಾಥವಾಗಿದ್ದು, ಚುನಾವಣೆ ಮೂಲಕ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಅತಂತ್ರರಾಗಿದ್ದಾರೆ.

ತಮ್ಮ ತಮ್ಮ ವಾರ್ಡ್ಗಳಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯದೇ ಇರುವುದರಿಂದ ಮತದಾರರ ಚುಚ್ಚು ಮಾತುಗಳನ್ನು ಕೇಳಿಸಿಕೊಳ್ಳುವ ಅನಿವಾರ್ಯತೆ ಸದಸ್ಯರುಗಳಿಗೆ ಎದುರಾಗಿದೆ. ಪಂಚಾಯಿತಿಗೆ ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ತಹಶೀಲ್ದಾರ್‌ರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿದೆ.

ಈ ನಡುವೆ ಅಲ್ಪ ಅವಧಿಯಲ್ಲಿಯೇ ೩ ತಹಶೀಲ್ದಾರ್‌ಗಳನ್ನು ಕಂಡಿರುವ ಸೋಮವಾರಪೇಟೆಯ ತಾಲೂಕು ಕಚೇರಿಯಲ್ಲಿರುವ ತಹಶೀಲ್ದಾರ್‌ರ ಕುರ್ಚಿ ‘ಮ್ಯೂಸಿಕಲ್ ಚೇರ್’ನಂತಾಗಿದ್ದು, ಕಳೆದ ೧೫ ತಿಂಗಳಲ್ಲಿ ಮೂವರು ತಹಶೀಲ್ದಾರ್ ಕರ್ತವ್ಯ ನಿರ್ವಹಿಸಿದ್ದಾರೆ. ಆಡಳಿತ ಮಂಡಳಿ ಇಲ್ಲದೇ ಇರುವುದರಿಂದ ಆಡಳಿತಾಧಿಕಾರಿಗಳೇ ಸಾಮಾನ್ಯ ಸಭೆಯನ್ನು ನಡೆಸಿದ್ದು, ನಿರೀಕ್ಷಿತ ಅಭಿವೃದ್ಧಿ ಹಾಗೂ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಚುನಾಯಿತ ಜನಪ್ರತಿನಿಧಿಗಳಿಂದ ವ್ಯಕ್ತವಾಗಿದೆ.

ಕಳೆದ ಸಾಲಿನ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಪೂರ್ಣಗೊಳ್ಳುವ ಸಮಯದಲ್ಲೇ ವಿಧಾನ ಸಭಾ ಚುನಾವಣೆಯೂ ಎದುರಾಗಿದ್ದು, ನೀತಿ ಸಂಹಿತೆಯಿAದಾಗಿ ಯಾವುದೇ ಪ್ರಕ್ರಿಯೆಗಳು ನಡೆದಿರಲಿಲ್ಲ. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೂ ತ್ವರಿತವಾಗಿ ಮೀಸಲಾತಿ ನಿಗದಿಪಡಿಸಿರಲಿಲ್ಲ. ಅಂತಿಮವಾಗಿ ತಾ. ೫ರಂದು ರಾಜ್ಯಾದ್ಯಂತ ಎಲ್ಲಾ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಿ ಆದೇಶಿಸಿದೆ.

ಇದರನ್ವಯ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿದೆ. ತಾ. ೭ರಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗಳೂ ಆಗಿರುವ ಆಯಾ ತಾಲೂಕು ತಹಶೀಲ್ದಾರ್‌ಗಳಿಗೆ ಜ್ಞಾಪನಾ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಈಗಾಗಲೇ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣಾ ದಿನಾಂಕವನ್ನು ತಾ. ೨೪ಕ್ಕೆ ನಿಗದಿ ಪಡಿಸಿದ್ದು, ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆ ಮುಂದಿನ ಆದೇಶದವರೆಗೆ ಸ್ಥಗಿತಗೊಂಡಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು ಆಡಳಿತ ಮಂಡಳಿ ಇಲ್ಲದೇ ೧೫ ತಿಂಗಳು ಸವೆಸಿದೆ. ಸದಸ್ಯರುಗಳು ಪ.ಪಂ.ನತ್ತ ಮುಖ ಮಾಡಲೂ ಸಹ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಆಡಳಿತಾಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಬಂದರೂ ಆಡಳಿತಕ್ಕೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಹಲವಷ್ಟು ಗಂಭೀರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ.

ಈ ಮಧ್ಯೆ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆ ನಡೆಸುವಂತೆ ಕಳೆದ ತಾ. ೭ ರಂದು ಸೂಚನೆ ನೀಡಿದ್ದರೂ ಆಡಳಿತಾಧಿಕಾರಿಗಳೂ ಆಗಿರುವ ತಾಲೂಕು ತಹಶೀಲ್ದಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸದಸ್ಯರುಗಳಲ್ಲಿ ಮತ್ತೆ ಅಸಮಾಧಾನ ವ್ಯಕ್ತವಾಗುತ್ತಿದೆ. ಈಗಾಗಲೇ ೧೫ ತಿಂಗಳು ಕಳೆದು ಹೋಗಿದ್ದು, ಇನ್ನೂ ಸಹ ವಿಳಂಬ ನೀತಿ ಅನುಸರಿಸುತ್ತಿರುವುದು ನಮ್ಮ ಅಧಿಕಾರ ಮತ್ತು ಹಕ್ಕನ್ನು ಕಿತ್ತುಕೊಳ್ಳುವ ಯತ್ನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣ ಚುನಾವಣೆಗೆ ದಿನಾಂಕ ನಿಗದಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಮೀಸಲಾತಿ ಅನ್ವಯ ಯಾರಿಗೆ ಅವಕಾಶ: ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೋಹಿನಿ, ಜೆಡಿಎಸ್‌ನಿಂದ ಆಯ್ಕೆಯಾಗಿ ನಂತರ ಬಿಜೆಪಿ ಸೇರ್ಪಡೆಗೊಂಡಿ ರುವ ನಾಗರತ್ನ, ತಟಸ್ಥ ನಿಲುವು ಹೊಂದಿರುವ ಜಯಂತಿ ಶಿವಕುಮಾರ್ ಹಾಗೂ ಕಾಂಗ್ರೆಸ್‌ನ ಶೀಲಾ ಡಿಸೋಜ ಅವರುಗಳಿಗೆ ಅವಕಾಶ ಒದಗಿ ಬಂದಿದೆ. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಾತಿ ಇರುವುದ ರಿಂದ ಬಿಜೆಪಿಯ ಮೋಹಿನಿ ಅವರಿಗೆ ಮಾತ್ರ ಅವಕಾಶ ಲಭ್ಯವಾಗಿದೆ.

೧೧ ಸದಸ್ಯ ಬಲದ ಪಟ್ಟಣ ಪಂಚಾಯಿತಿಗೆ ಕಳೆದ ೨೮.೧೦.೨೦೧೮ ರಂದು ಚುನಾವಣೆ ನಡೆದಿತ್ತು. ಈ ಸಂದರ್ಭ ಬಿಜೆಪಿಯಿಂದ ೩, ಕಾಂಗ್ರೆಸ್‌ನಿAದ ೪, ಜೆಡಿಎಸ್‌ನಿಂದ ೩ ಹಾಗೂ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾ ಗಿದ್ದರು. ಪಕ್ಷೇತರ ಸದಸ್ಯರಾಗಿದ್ದ ಶುಭಕರ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ನಂತರ ಎರಡು ಸ್ಥಾನಕ್ಕೆ ಮರುಚುನಾವಣೆ ನಡೆದು, ಹೆಚ್ಚುವರಿ ಯಾಗಿ ಬಿಜೆಪಿ ಒಂದು ಸ್ಥಾನ ಪಡೆಯಿತು. ಈ ಹಿನ್ನೆಲೆ ಬಿಜೆಪಿಯ ಸಂಖ್ಯೆ ೫ಕ್ಕೆ ಏರಿಕೆಯಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್‌ನ ನಾಗರತ್ನ ಹಾಗೂ ಜೀವನ್ ಅವರುಗಳು ಅಧಿಕೃತವಾಗಿ ಬಿಜೆಪಿ ಸೇರಿದ್ದು, ಮೈತ್ರಿ ಧರ್ಮ ಪಾಲನೆಯಾದರೆ ಬಿಜೆಪಿ-ಜೆಡಿಎಸ್ ಸೇರಿ ೭ ಮತಗಳು ಇವೆ. ಇದರೊಂದಿಗೆ ಸಂಸದರ ಮತವೂ ಗಣನೆಗೆ ಬಂದರೆ ೮ ಮತಗಳು ಬಿಜೆಪಿ ಪಾಳಯದಲ್ಲಿವೆ.

ಕಾಂಗ್ರೆಸ್‌ನಿAದ ಅಧಿಕೃತವಾಗಿ ೩ ಹಾಗೂ ಶಾಸಕರೂ ಸೇರಿದರೆ ಸಂಖ್ಯೆ ೪ಕ್ಕೆ ಏರಲಿದೆ. ತಟಸ್ಥವಾಗಿರುವ ಸದಸ್ಯರ ಮತ ದೊರೆತರೆ ೫ರ ಸಂಖ್ಯಾಬಲ ಲಭಿಸಲಿದೆ. ಮೇಲ್ನೋಟಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಅಧಿಕಾರ ಹಿಡಿಯುವುದು ಸುಲಭವಾದರೂ, ಪ್ರತಿಕೂಲ ಪರಿಸ್ಥಿತಿಯನ್ನು ಅನುಕೂಲಕರವಾಗಿಸಿಕೊಂಡು ಅಧ್ಯಕ್ಷ ಸ್ಥಾನಕ್ಕೇರಲು ಕಾಂಗ್ರೆಸ್‌ನ ಶೀಲಾ ಡಿಸೋಜ ಕಸರತ್ತು ನಡೆಸುತ್ತಿದ್ದಾರೆ.

- ವಿಜಯ್ ಹಾನಗಲ್