ಮಡಿಕೇರಿ, ಆ. ೨೮: ಪ್ರಸ್ತುತ ಮಖಾ ಮಳೆ ನಕ್ಷತ್ರ ನಡೆಯುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಈ ಮಳೆ ನಕ್ಷತ್ರ ಮುಂದುವರಿಯಲಿದೆ. ತಾ.೩೧ರಿಂದ ಹುಬ್ಬಾ ಮಳೆ ಪ್ರಾರಂಭವಾಗಲಿದೆ. ವಾರದ ಹಿಂದೆ ಬಿಡುವು ನೀಡಿದ್ದ ಮಳೆ ಕಳೆದ ಕೆಲ ದಿನಗಳಿಂದ ಜಿಲ್ಲಾದ್ಯಂತ ಸುರಿಯುತ್ತಿದೆ. ಜಿಲ್ಲೆ ಬಹುತೇಕ ಮೋಡ ಕವಿದ ವಾತಾವರಣದೊಂದಿಗೆ ಮಳೆಗಾಲದ ಚಿತ್ರಣದಲ್ಲೇ ಕಂಡುಬರುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೦.೫೦ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೦.೭೬, ವೀರಾಜಪೇಟೆ ೦.೨೭, ಪೊನ್ನಂಪೇಟೆ ೦.೫೬, ಸೋಮವಾರಪೇಟೆಯಲ್ಲಿ ೦.೭೪ ಇಂಚು ಮಳೆಯಾಗಿದೆ. ಮಡಿಕೇರಿ ಕಸಬಾದಲ್ಲಿ ೧.೨೪, ಭಾಗಮಂಡಲ ೧.೫೪, ಪೊನ್ನಂಪೇಟೆ ೧.೩೨, ಶಾಂತಳ್ಳಿ ಹೋಬಳಿಯಲ್ಲಿ ೧.೩೬ ಇಂಚುಗಳಷ್ಟು ಹೆಚ್ಚಿನ ಮಳೆಯಾಗಿದೆ.