ಶ್ರೀಮಂಗಲ, ಆ. ೨೯: ಕೊಡಗಿನಲ್ಲಿ ರಸ್ತೆ ಬದಿಯ ಭತ್ತದ ಗದ್ದೆಗಳನ್ನು ರಾತೋರಾತ್ರಿ ಬರೆಯ ಮಣ್ಣು ಕೊರೆದು ಹಾಕಿ ವಾಣಿಜ್ಯ ಉದ್ದೇಶಕ್ಕೆ ತೋಟವಾಗಿ ಪರಿವರ್ತಿಸುವುದು ಅಥವಾ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡುವುದು, ಮಾರಾಟ ಮಾಡಿ ತೋಟವಾಗಿ ಅತಿ ಶೀಘ್ರ ಹಣ ಮಾಡಿಕೊಳ್ಳುವ ಧಾವಂತದಲ್ಲಿ ಇರುವಾಗಲೇ ಇಲ್ಲೊಬ್ಬ ಯುವಕ ಮುಖ್ಯ ರಸ್ತೆ ಬದಿಯಲ್ಲಿ ಇರುವ ಬೆಲೆಬಾಳುವ ಜಾಗವನ್ನು ಭತ್ತದ ಗದ್ದೆಯಾಗಿ ಮತ್ತೆ ಪರಿವರ್ತಿಸಿ, ಸಂರಕ್ಷಣೆ ಮಾಡಿರುವ ವಿಚಾರ ಗಮನ ಸೆಳೆದಿದೆ.

ಎರಡು ದಶಕಗಳ ಹಿಂದೆ ಕೃಷಿಯತ್ತ ಉತ್ಪಾದನಾ ವೆಚ್ಚ ಹೆಚ್ಚಳದಿಂದ ನಿರಾಸಕ್ತಿಯಿಂದ ಗದ್ದೆಯನ್ನು ಪಾಳು ಬಿಡಲಾಗಿತ್ತು. ಇದರ ನಡುವೆ ಗದ್ದೆಯ ಮೂಲಕ ಸಾರ್ವಜನಿಕ ಹೊಸ ರಸ್ತೆ ನಿರ್ಮಾಣದಿಂದ ಬೇರೆ ಮಾರ್ಗದಲ್ಲಿದ್ದ ತೋಡನ್ನು ಬದಲಾಯಿಸಿ ಗದ್ದೆಯ ಮಧ್ಯೆ ಬಿಡಲಾಯಿತು.ಇದರಿಂದ ಕೃಷಿ ಮಾಡುವ ಉದ್ದೇಶಕ್ಕೆ ಮತ್ತೆ ಹಿನ್ನೆಡೆಯಾಯಿತು.

ಇದರಿಂದ ಭೂ ಸವಕಳಿ ಉಂಟಾಗಿ ತೋಡಿನ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಹೋಗಿ ತೋಡಿನ ವಿಸ್ತಾರ ಹೆಚ್ಚಾಗಿ ಭೂಕುಸಿತದಿಂದ ಏರಿಗಳು ಕೊಚ್ಚಿ ಹೋಗಿ ದೊಡ್ಡ ಹಳ್ಳವೇ ಗದ್ದೆ ನಡುವೆ ನಿರ್ಮಾಣವಾಯಿತು.ನೀರು ನಿಲ್ಲದೇ ಗದ್ದೆ ಮಾಡುವುದನ್ನು ತಂದೆ ಗಣೇಶ್ ನಾಣಯ್ಯ ತ್ಯಜಿಸಿದ್ದರು. ತಂದೆಯ ಕಾಲದಲ್ಲಿ ಉಂಟಾದ ಅಭಿವೃದ್ಧಿಯ ಹೆಸರಿನಲ್ಲಿ ಗದ್ದೆಯ ಒಂದು ಭಾಗ ತೋಡಿಗೆ "ಬಲಿ ಯಾಗಿ" ಕಳೆದುಕೊಂಡು ಭತ್ತದ ಕೃಷಿಯನ್ನು ನಿಲ್ಲಿಸಿದ್ದರು.

ಆದರೆ ಇದೀಗ ಗಣೇಶ್ ನಾಣಯ್ಯ ಅವರ ಪುತ್ರ ಯುವಕ ಸಿತೀನ್ ಸುಬ್ಬಯ್ಯ ಭತ್ತದ ಕೃಷಿಯ ಮಹತ್ವವನ್ನು ಅರಿತು ಸುಮಾರು ಎರಡು ದಶಕದಿಂದ ಪಾಳುಬಿಟ್ಟು ಗಿಡ ಮರವಾಗಿ ಬೆಳೆದಿದ್ದ ತನ್ನ ಸುಮಾರು ಒಂದೂವರೆ ಎಕರೆ ರಸ್ತೆ ಬದಿಯ ಭತ್ತದ ಗದ್ದೆಯನ್ನು ಹೆಚ್ಚಿನ ಖರ್ಚು ಮಾಡಿ, ಜೆಸಿಬಿ, ಟಿಪ್ಪರ್ ಬಳಸಿ ಗದ್ದೆಯಾಗಿ ರೂಪಿಸಿ ಭತ್ತದ ಕೃಷಿ ಮಾಡಿರುವುದು ರಸ್ತೆಯ ಬದಿಯಲ್ಲಿ ದಿನನಿತ್ಯ ಸಂಚರಿಸುವ ನೂರಾರು ಜನರ ಗಮನ ಸೆಳೆದಿದೆ. ಈ ಒಂದು ಹೊಸ ಪ್ರಯೋಗಕ್ಕೆ ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದ ಅಣ್ಣೀರ ಸಿತೀನ್ ಸುಬ್ಬಯ್ಯ ಎಂಬ ಉತ್ಸಾಹಿ ಯುವಕ ಸಾಕ್ಷಿಯಾಗಿದ್ದು, ಪ್ರಸಕ್ತ ವರ್ಷ ಪ್ರಯತ್ನ ನಡೆಸಿ ಭತ್ತದ ಗದ್ದೆ ಮಾಡಿ ಅದರಲ್ಲಿ ನಾಟಿ ಕಾರ್ಯವನ್ನು ಪೂರೈಸುವ ಮೂಲಕ ಗಮನ ಸೆಳೆದಿದ್ದಾನೆ.

ಈ ಬಗ್ಗೆ ಅವರು ಪ್ರತಿಕ್ರಿಯಿಸಿ ತಾನು ಹಸುಗಳನ್ನು ಸಾಕುತ್ತಿದ್ದು, ನಮ್ಮ ಆರೋಗ್ಯದ ದೃಷ್ಟಿಯಿಂದ ನಮಗೆ ಬೇಕಾಗುವ ಸ್ವಾಭಾವಿಕವಾದ ಆಹಾರವನ್ನು ನಾವೇ ಉತ್ಪಾದಿಸಿ ಆದಷ್ಟು ಕಡಿಮೆ ಪ್ರಮಾಣದ ರಾಸಾಯನಿಕ ಬಳಸಿ ಪಡೆಯುವ ಉದ್ದೇಶದಿಂದ ಹಾಗೂ ಜಾನುವಾರುಗಳಿಗೆ ಮೇವು ಪೂರೈಸುವ ಉದ್ದೇಶದಿಂದ ಸುಮಾರು ೨೦ ವರ್ಷಗಳಿಂದ ಪಾಳು ಬಿಟ್ಟ ಗದ್ದೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡು ಬೆಳೆದಿದ್ದು, ರಸ್ತೆ ನಿರ್ಮಾಣ ಸಂದರ್ಭ ಗದ್ದೆ ವಿರೂಪಗೊಂಡಿತ್ತು. ಅವುಗಳನ್ನು ತೆರವುಗೊಳಿಸಿ ಇದೀಗ ಭತ್ತದ ಬೇಸಾಯವನ್ನು ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿದ್ದಾರೆ.

ಬಿರುನಾಣಿ-ಹುದಿಕೇರಿ ಮುಖ್ಯರಸ್ತೆಯಲ್ಲಿರುವ ಈ ಬೆಲೆಬಾಳುವ ಜಾಗವನ್ನು ಬೇರೆ ಉದ್ದೇಶಕ್ಕೆ ಪರಿವರ್ತನೆ ಮಾಡಿ ಹಣ ಮಾಡಿಕೊಳ್ಳಬಹುದಾಗಿತ್ತು. ಆದರೆ ಭತ್ತದ ಗದ್ದೆಯನ್ನು ಭತ್ತದ ಗದ್ದೆಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಸಿದ್ದು, ಇದೀಗ ಈ ಮುಖ್ಯ ರಸ್ತೆಯಲ್ಲಿ ಸಾಗುವ ನಾಡಿನ ನೂರಾರು ಜನರಿಗೆ ಪ್ರೇರಣೆಯಾಗುವುದರೊಂದಿಗೆ ಈ ಯುವಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ರಸ್ತೆ ಬದಿಯಲ್ಲಿ ಪಾಳು ಬಿದ್ದ ಗದ್ದೆಯನ್ನು ಜೆಸಿಬಿ ಮೂಲಕ ಸಮತಟ್ಟು ಮಾಡಿ ಕಾಡು ಮೇಡುಗಳನ್ನು ಸರಿಪಡಿಸಿ ಗದ್ದೆ ಮಾಡುವ ಸಂದರ್ಭ ಹಲವಾರು ಜನರು ನಕಾರಾತ್ಮಕವಾಗಿ ಹಾಗೂ ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಅದು ಎಲ್ಲವನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದ ಯುವಕ ಇದೀಗ ಎರಡು ದಶಕಗಳಿಂದ ಪಾಳು ಬಿದ್ದಿದ್ದ ಗದ್ದೆಯನ್ನು ಭತ್ತದ ಕೃಷಿಯ ಮಹತ್ವ ಅರಿತು ಸವಾಲಾಗಿ ಸ್ವೀಕರಿಸಿ ಭತ್ತದ ಕೃಷಿ ಮಾಡಿದ್ದಾನೆ.

ಆಧುನಿಕತೆಯ ಸೆಳೆತದಲ್ಲಿ ರಸ್ತೆ ಬದಿಯ ಅತಿ ಹೆಚ್ಚು ಬೆಲೆಬಾಳುವ ಜಾಗವನ್ನು ಮಾರಾಟ ಮಾಡಿ ಅಥವಾ ಭೂ ಪರಿವರ್ತನೆ ಮಾಡಿ ಐಷಾರಾಮಿ ಜೀವನ ನಡೆಸುವ ಹಾದಿ ಬಿಟ್ಟು ಲಾಭ ನಷ್ಟದ ಲೆಕ್ಕಾಚಾರ ಮಾಡದೇ ಭತ್ತದ ನಾಟಿ ಮಾಡಿ ಹಸಿರಿನಿಂದ ಕಂಗೊಳಿಸುವAತೆ ಮಾಡಿರುವುದು ಕೊಡಗಿನ ಕೃಷಿ ಪ್ರಿಯರಿಗೆ ಮಾದರಿಯಾಗಿದ್ದಾನೆ.

- ಅಣ್ಣೀರ ಹರೀಶ್ ಮಾದಪ್ಪ