ಮಡಿಕೇರಿ, ಆ. ೨೯: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮಗಳದ್ದೇ ಸದ್ದು. ಕಾರ್ಖಾನೆಗಳಿಲ್ಲದಿದ್ದರೂ ನಕಲಿ ಬಂದೂಕುಗಳನ್ನು ತಯಾರು ಮಾಡುವಲ್ಲಿ ಈ ಪ್ರದೇಶ ಹೆಸರುವಾಸಿಯಾಗಿದೆ. ಈಗಾಗಲೇ ಪೊಲೀಸರು ನಕಲಿ ಬಂದೂಕು ತಯಾರಿ ಮಾಡುತ್ತಿರುವ ಕೇರಳದ ವ್ಯಕ್ತಿಯನ್ನು ಬಂಧಿಸಿ ಕೋವಿಗಳನ್ನು ವಶಪಡಿಸಿಕೊಂಡಿದ್ದಾರೆ.

ನಿನ್ನೆ ಕೂಡ ಒಂದು ಕೋವಿ ಸಿಕ್ಕಿದೆ. ಇದೀಗ ಮತ್ತೆ ಮೂರು ಕೋವಿಗಳು ಪತ್ತೆಯಾಗಿದ್ದು, ಆರೋಪಿಗಳ ಶೋಧಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದಾರೆ.

ಇದೊಂದು ಮುಗಿಯದ ಕತೆಯಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಸುರೇಶ ಎಂಬಾತ ಸಣ್ಣಪುಲಿಕೋಟು ಗ್ರಾಮದಲ್ಲಿ ಕತ್ತಿ, ಗುದ್ದಲಿ ರಿಪೇರಿ ಕೆಲಸ ಮಾಡಿಕೊಂಡಿದ್ದವನು ಕುಲ ಕಸುಬಿನೊಂದಿಗೆ ನಕಲಿ ಕೋವಿ ತಯಾರಿಕೆಯಲ್ಲಿ ತೊಡಗಿದ್ದ. ಈ ಬಗ್ಗೆ ಸುಳಿವರಿತ ಭಾಗಮಂಡಲ ಪೊಲೀಸರು ಆತನನ್ನು ಬಂಧಿಸಿ ೨ ಕೋವಿ ಹಾಗೂ ಒಂದು ಪಿಸ್ತೂಲ್ ವಶಪಡಿಸಿಕೊಂಡು ಆರೋಪಿ ಸುರೇಶ್ ಸೇರಿದಂತೆ ಖರೀದಿದಾರರಾದ ಮೂವರನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ನಿನ್ನೆ ದಿನ ಕರಿಕೆಯ ದಿನೇಶ್ ಎಂಬಾತನನ್ನು ಬಂಧಿಸಿ ಮತ್ತೊಂದು ಕೋವಿ ವಶಪಡಿಸಿಕೊಂಡಿದ್ದಾರೆ.

ಇದೀಗ ಕರಿಕೆಯ ಕಟ್ಟೆಕೋಡಿ ಗ್ರಾಮದಲ್ಲಿ ಮತ್ತೆ ಮೂರು ನಕಲಿ ಕೋವಿಗಳು ಪೊಲೀಸರಿಗೆ ಸಿಕ್ಕಿವೆ.