ಕಣಿವೆ, ಆ. ೨೯: ಕೆಲ ಜನರು ಗೋವುಗಳ ಪೀಡಕರು, ಕೆಲವರ ಭಾವನೆಗಳಿಗೆ ಧಕ್ಕೆ ಆದರೂ ಅದನ್ನು ಆಹಾರವಾಗಿ ಸ್ವೀಕರಿಸುತ್ತಾರೆ. ಇನ್ನು ಶ್ವಾನಗಳನ್ನು ಹತ್ತಿರಕ್ಕೂ ಸೇರಿಸಲಾರರು ಎಂಬ ಮಾತನ್ನು ನಾವು ಸಾಮಾನ್ಯವಾಗಿ ಅಲ್ಲಲ್ಲಿ ಕೇಳುತ್ತೇವೆ.

ಆದರೆ ಇಲ್ಲೊಬ್ಬ ಶ್ವಾನಗಳ ಪ್ರೇಮಿ ಹಾಗೂ ಗೋಪಾಲಕ ಅಪ್ಪಟ ಗೋ ಪ್ರಿಯ- ಶ್ವಾನಪ್ರಿಯ ಅಂದರೆ, ಆತನ ಬೇರಾವುದೋ ವೈಯಕ್ತಿಕ ಲೋಪದಿಂದಾಗಿ ಇದೀಗ ಸೆರೆಮನೆವಾಸದಲ್ಲಿದ್ದಾನೆ. ಪರಿಣಾಮ ಆತ ಸಾಕಿ ಸಲಹುತ್ತಿದ್ದ ಗೋವುಗಳು ಬೀದಿ ಪಾಲಾಗಿವೆ. ಅರ್ಥಾತ್ ಹೆದ್ದಾರಿಯ ಪಾಲಾಗಿವೆ. ಇವರ ಹೆಸರು ಅಬೂಬಕರ್. ಅಲಿಯಾಸ್ ಪೋಕರ್. ಇವರು ಏಳನೇ ಹೊಸಕೋಟೆ ವಾಸಿ. ಇವರಿಗೆ ಗೋವುಗಳೆಂದರೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ. ಹಾಗಾಗಿ ಸುಮಾರು ಎಂಟರಿAದ ಹತ್ತು ಗೋವುಗಳನ್ನು ಸಾಕಿದ್ದಾರೆ.

ಇವರಿಗೆ ವಾಸ ಮಾಡಲು ಸರಿಯಾದ ಸೂರು ಕೂಡ ಇಲ್ಲ. ಆದಾಗ್ಯೂ ಗೋವುಗಳನ್ನು ಪ್ರೀತಿ ಮಾಡುತ್ತಾ ಸಾಕಿ ಸಲಹುತ್ತಿದ್ದಾರೆ. ರಾತ್ರಿ ವೇಳೆ ಗೋವುಗಳನ್ನು ಕಟ್ಟಲು ಸರಿಯಾದ ವ್ಯವಸ್ಥೆಯೂ ಇವರಲ್ಲಿ ಇಲ್ಲ. ಹಾಗಾಗಿ ಈ ಗೋವುಗಳು ಅಲ್ಲಲ್ಲಿ ಕಂಡ ಕಂಡಲ್ಲಿ ಅಂಗಡಿ ಮಳಿಗೆಗಳ ಬಳಿ, ಹೆದ್ದಾರಿ ಬದಿಯಲ್ಲಿ ಮಲಗುತ್ತವೆ.

ಮೂರು ದಿನದ ಕಂದಮ್ಮ

ಈ ಅಬೂಬಕರ್ ಸಾಕಿರುವ ಹಸುವೊಂದು ಕಳೆದ ಮೂರು ದಿನಗಳ ಹಿಂದಷ್ಟೇ ಕರುವೊಂದಕ್ಕೆ ಜನ್ಮ ನೀಡಿದ್ದು ಅದರ ಪಾಲನೆ ಹಾಗೂ ಆರೈಕೆಗೆ ಅಬೂಬಕರ್ ಇಲ್ಲದ ಕಾರಣ ತಾಯಿ ಹಸು ಅದರ ಹಾಲನ್ನೆಲ್ಲಾ ಈ ಹಸುಳೆ ಕರುವಿಗೆ ಹಿಂಡುತ್ತಿದೆ.

ಈ ಪುಟ್ಟ ಕಂದಮ್ಮ ಕರುವನ್ನು ಕಟ್ಟಿ ನೋಡುವವರು ಇಲ್ಲದ ಕಾರಣ ಹೆದ್ದಾರಿಯ ಬದಿಯಲ್ಲಿ ಹಸಿರು ಹುಲ್ಲು ಹುಡುಕಿ ಹೆದ್ದಾರಿಯಲ್ಲಿ ಸಾಗುವ ಹಸುಗಳ ಹಿಂದೆ ತಾಯಿಯನ್ನು ಅರಸುತ್ತಾ ಪುಟ್ಟ ಕರು ಅಡ್ಡಾಡುತ್ತಿದ್ದ ಚಿತ್ರಣ ‘ಶಕ್ತಿ’ ಗೆ ಸೆರೆಯಾಯಿತು.

ಈ ಸಂದರ್ಭ ಮಾಹಿತಿ ನೀಡಿದ ಸ್ಥಳೀಯ ನಿವಾಸಿ, ಏಳನೇ ಹೊಸ ಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಕುಂಜ್ಞಿ ಕುಟ್ಟಿ, ಈ ಅಬೂಬಕರ್‌ಗೆ ಹಸುಗಳು ಹಾಗೂ ನಾಯಿಗಳೆಂದರೆ ಇಷ್ಟ. ಈತ ಸಾಕಿರುವ ಶ್ವಾನಗಳಂತು ಹಸುಗಳನ್ನು ಬಿಟ್ಟು ಇರಲ್ಲ. ಅವುಗಳು ಮೇಯಲು ಎಲ್ಲೇ ಹೋದರೂ ಅವುಗಳ ಹಿಂದೆಯೇ ಇರುತ್ತವೆ. ಶ್ವಾನಗಳಿಗೆಂದು ಅಂಗಡಿಗಳಲ್ಲಿ ಬಿಸ್ಕತ್ ಪ್ಯಾಕೆಟ್‌ಗಳನ್ನು ಖರೀದಿಸಿ ತಿನ್ನಿಸುತ್ತಿದ್ದರು. ಈಗ ಅವರು ಊರಲ್ಲಿ ಇಲ್ಲ. ಹಾಗಾಗಿ ಹಸುಗಳು ಹಾಗೂ ಶ್ವಾನಗಳು ಬೀದಿ ಪಾಲಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆದ್ದಾರಿಯ ಸವಾರರಿಗೆ ಸಂಚಕಾರ

ಏಳನೇ ಹೊಸಕೋಟೆಯ ಈ ಗೋವುಗಳ ಪ್ರೇಮಿ ಅಬೂಬಕರ್ ಆರೋಪಿಯಾಗಿ ಸೆರೆಮನೆಯಲ್ಲಿದ್ದಾರೆ. ಈ ಸಮಸ್ಯೆಯಿಂದಾಗಿ ಅವರು ಸಾಕಿರುವ ಜಾನುವಾರುಗಳು ಬೀದಿಪಾಲಾಗಿವೆ. ಆದರೆ ಇತರೇ ಮಂದಿ ಸಾಕಿರುವ ಹಸುಗಳನ್ನು ಹೆದ್ದಾರಿಗೆ ಬಿಡುತ್ತಿರುವ ಕಾರಣ ಏಳನೇ ಹೊಸಕೋಟೆ, ಆನೆಕಾಡು, ಗುಡ್ಡೆಹೊಸೂರು ಮೊದಲಾದ ಕಡೆಗಳಲ್ಲಿ ಹೆದ್ದಾರಿಯ ಮಧ್ಯೆಯೇ ಸಂಚರಿಸುವ ಜಾನುವಾರುಗಳಿಂದಾಗಿ ದಿನಂಪ್ರತಿ ವಾಹನಗಳ ಅವಘಡಗಳು ಜರುಗುತ್ತಿವೆ. ಇದರಿಂದಾಗಿ ವಾಹನಗಳ ಚಾಲಕರಿಗೆ ಸಂಚಾರ ಸಂಚಕಾರವಾಗಿದೆ.

ಕೂಡಲೇ ಹೆದ್ದಾರಿಯುದ್ದಕ್ಕೂ ಇರುವ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ತುರ್ತಾಗಿ ಜಾನುವಾರುಗಳ ದೊಡ್ಡಿಯನ್ನು ಆರಂಭಿಸುವ ಮೂಲಕ ಹೆದ್ದಾರಿಯಲ್ಲಿ ಕಿರಿ ಕಿರಿ ಮಾಡುವ ಜಾನುವಾರುಗಳನ್ನು ತಂದಿಟ್ಟು ನಿರ್ವಹಿಸಬೇಕಿದೆ. -ವರದಿ : ಕೆ.ಎಸ್.ಮೂರ್ತಿ