ಚೆಯ್ಯಂಡಾಣೆ, ಆ. ೨೯: ರಕ್ತದಾನಕ್ಕೆ ಮಿಗಿಲಾಗಿದ್ದು ಯಾವುದು ಇಲ್ಲ ರಕ್ತದಾನ ಶ್ರೇಷ್ಠವಾದ ದಾನ ಎಂದು ಮಡಿಕೇರಿ ರಕ್ತನಿಧಿ ಕೇಂದ್ರದ ಡಾ : ಲೇಖಾಶ್ರೀ ಹೇಳಿದರು.

ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡಗು ರಕ್ತ ನಿಧಿ ಕೇಂದ್ರ ಹಾಗೂ ನರಿಯಂದಡ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರೆದರೂ ಕೂಡ ರಕ್ತಕ್ಕೆ ಮಿಗಿಲಾಗಿ ಬೇರೆ ಯಾವುದನ್ನು ಕಂಡು ಹಿಡಿದಿಲ್ಲ, ಮನುಷ್ಯನಿಗೆ ರಕ್ತ ಅವಶ್ಯಕತೆ ಇದೆ ಅಂದರೆ ಇನ್ನೊಬ್ಬರು ರಕ್ತದಾನ ಮಾಡಿದರೆ ಮಾತ್ರ ಅದು ಉಪಯೋಗವಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ತದ ಅವಶ್ಯಕತೆ ಹೆಚ್ಚಿದೆ, ಒಬ್ಬರು ರಕ್ತದಾನ ಮಾಡಿದರೆ ಮೂರು ಜೀವ ಉಳಿಸಬಹುದು. ಸಾರ್ವಜನಿಕರಿಗೆ ಹೆಚ್ಚಾಗಿ ರಕ್ತದಾನ ಮಾಡಿ ಸಹಕರಿಸಿ ಎಂದರು.

ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಉದ್ಘಾಟಿಸಿದರು. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಕ್ತದಾನಿಗಳು ರಕ್ತದಾನ ಮಾಡಿದರು. ಈ ಸಂದರ್ಭ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ, ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಂಚು ಗೌತಮಿ, ಎಲ್‌ಎಸ್‌ವಿ ವೇದಾವತಿ, ಸಿಎಚ್‌ಒಗಳು, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.