ಸಿದ್ದಾಪುರ.ಆ. ೨೯: ಗುಂಪಿನಿAದ ಬೇರ್ಪಟ್ಟು ನೀರು ಕುಡಿಯಲು ಬಂದ ಸಲಗ ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಅಮ್ಮತಿ ಸಮೀಪದ ಹೊಸೂರು ಬೆಟ್ಟಗೇರಿ ಗ್ರಾಮದ ಕನ್ನಡ ಮಠ ಎಂಬಲ್ಲಿ ನಡೆದಿದೆ.

ಕಾಡಾನೆಗಳ ಗುಂಪಿನಿAದ ಬೇರ್ಪಟ್ಟ ೧೦ವರ್ಷ ಪ್ರಾಯದ ಸಲಗ ನೀರು ಕುಡಿಯಲು ಕೆರೆಗೆ ಇಳಿದಿದ್ದು, ಕಾಲು ಜಾರಿ. ರಾತ್ರಿ ಕೆರೆಗೆ ಬಿದ್ದು ಮುಳುಗಿ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಗುರುವಾರದಂದು ಕಾರ್ಮಿಕರು ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾಡಾನೆಯು ಕೆರೆಯಲ್ಲಿ ತೇಲುತ್ತಿರುವುದು ಕಂಡುಬAದಿದೆ. ಈ ಬಗ್ಗೆ ತೋಟದ ವ್ಯವಸ್ಥಾಪಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮೃತ ಕಾಡಾನೆಯನ್ನು ಹಗ್ಗದ ಮೂಲಕ ಕಟ್ಟಿ ಎಳೆದು ಕೆರೆಯಿಂದ ಹೊರ ತೆಗೆಯಲಾಯಿತು. ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ವನ್ಯಜೀವಿ ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ನಡೆಸಿದರು. ನಂತರ ಕಾಡಾನೆಯ ಕಳೇಬರವನ್ನು ಕಾಫಿ ತೋಟದೊಳಗೆ ಅಂತ್ಯಕ್ರಿಯೆ ಮಾಡಿ ಆನೆಯ ೨ ದಂತಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿತ್ತು.

ಸ್ಥಳದಲ್ಲಿ ವೀರಾಜಪೇಟೆ ವಿಭಾಗದ ಉಪ ಸಂರಕ್ಷಣಾಧಿಕಾರಿ ಜಗನ್ನಾಥ್, ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್, ಉಪವಲಯ ಅರಣ್ಯ ಅಧಿಕಾರಿಗಳಾದ ಕನ್ನಂಡ ರಂಜನ್, ದೇಯಂಡ ಸಂಜಿತ್ ಸೋಮಯ್ಯ, ಅರುಣ್ ಹಾಗೂ ಎಸಿಎಫ್ ಗೋಪಾಲ್, ಸಿಬ್ಬಂದಿಗಳಾದ ವಿನೋದ್, ಅಚ್ಚಯ್ಯ, ವಿನೋದ್, ಸಚಿನ್, ಪ್ರವೀಣ್, ಅಖಿಲೇಶ್, ಮುರುಗನ್, ಗಣೇಶ್, ಆದರ್ಶ್, ಸತೀಶ್ ಸೇರಿದಂತೆ ಆನೆ ಕಾರ್ಯಪಡೆ ತಂಡ. ಆರ್‌ಆರ್‌ಟಿ ತಂಡ ಹಾಗೂ ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.