ಮಡಿಕೇರಿ, ಆ. ೨೮: ಬಲ್ಲಮಾವಟಿ ಗ್ರಾಮ ಪಂಚಾ ಯಿತಿಗೆ ಒಳಪಟ್ಟ ಪೇರೂರು ಗ್ರಾಮದಲ್ಲಿ ೬.೨೫ ಎಕರೆ ಪರಾಧೀನ ಬಾಣೆ ಜಾಗ ಹಾಗೂ ಪೈಸಾರಿ ಜಾಗ ೫ ಎಕರೆ ಪ್ರದೇಶವನ್ನು ಬಳಸಿಕೊಂಡು ರೆಸಾರ್ಟ್ ನಿರ್ಮಾಣಕ್ಕೆ ಕೇರಳ ಮೂಲಕ ವ್ಯಕ್ತಿಯೊಬ್ಬರು ತಯಾರಿ ನಡೆಸುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ದೊಡ್ಡಪುಲಿಕೋಟು ಗ್ರಾಮ ಹಿತರಕ್ಷಣಾ ಸಮಿತಿ ತಿಳಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖರು, ದೊಡ್ಡಪುಲಿಕೋಟು, ಪೇರೂರು ಗ್ರಾಮದ ಸರಹದ್ದಿನಲ್ಲಿರುವ ಕಪ್ಪೊಳೆ ಎಂಬ ಹೊಳೆಯ ಬದಿಯಲ್ಲಿ ರೆಸಾರ್ಟ್ ನಿರ್ಮಿಸುತ್ತಿದ್ದು, ಕಪ್ಪೊಳೆಯ ಸಮೀಪವೇ ಗ್ರಾಮಕ್ಕೆ ನೈಸರ್ಗಿಕ ನೀರು ಸರಬರಾಜಿನ ಮೂಲವಿದೆ. ಗ್ರಾಮದ ೨೫೦ ಕುಟುಂಬಗಳು ಕುಡಿಯುವ ನೀರಿಗಾಗಿ ಈ ಮೂಲವನ್ನೇ ಅವಲಂಭಿಸಿವೆ. ಶ್ರೀ ಕೋಟೆ ಭಗವತಿ ದೇವಸ್ಥಾನ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ವಿವಿಧ ಸಂಘ ಸಂಸ್ಥೆಗಳು ಕೂಡ ಈ ನೀರಿನ ಮೂಲವನ್ನೇ ಅವಲಂಬಿಸಿಕೊAಡಿವೆ. ಈ ಗ್ರಾಮವು ಪ್ರಾಕೃತಿಕ ವಿಕೋಪದ ಪಟ್ಟಿಯಲ್ಲಿಯೂ ಇರುವುದರಿಂದ ರೆಸಾರ್ಟ್ ನಿರ್ಮಾಣದಿಂದ ಭೂಕುಸಿತ ಸಂಭವಿಸುವುದಲ್ಲದೆ ಪ್ರವಾಸಿಗರಿಂದ ನೀರು ಕಲುಷಿತಗೊಂಡು ಜನರಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಿದೆ ಎಂದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಇತ್ತೀಚೆಗೆ ಗ್ರಾಮಸ್ಥರೆಲ್ಲರೂ ಸಭೆ ಸೇರಿ ಜಿಲ್ಲಾಧಿಕಾರಿ, ಶಾಸಕರು ಹಾಗೂ ಸಂಬAಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮನವಿ ಮಾಡಲಾಗುತ್ತದೆ. ಸೆ.೨೦ರೊಳಗೆ ನಮ್ಮ ಮನವಿಗೆ ಸ್ಪಂದನೆÀ ಸಿಗದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಅವರುಗಳು ತಿಳಿಸಿದರು.

ಗೋಷ್ಠಿಯಲ್ಲಿ ಬಲ್ಲಮಾವಟಿ ಗ್ರಾ.ಪಂ. ಮಾಜಿ ಸದಸ್ಯ ಕರವಂಡ ಲವಾ ನಾಣಯ್ಯ, ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ಸದಸ್ಯ ಮುಕ್ಕಾಟಿಕ ಸುತನ್ ಸುಬ್ಬಯ್ಯ, ಕೋಟೆ ಭಗವತಿ ದೇವಾಲಯದ ಅಧ್ಯಕ್ಷ ಅಪ್ಪಚ್ಚಿರ ಬಿ. ತಮ್ಮಯ್ಯ, ದೊಡ್ಡಪುಲಿಕೋಟು ಗ್ರಾಮದ ತಕ್ಕ ಮುಖ್ಯಸ್ಥರಾದ ಕರವಂಡ ಎಂ. ಬೋಪಣ್ಣ, ನೆಲಜಿ ವಿಎಸ್‌ಎಸ್‌ಎನ್ ನಿರ್ದೇಶಕ ಕರವಂಡ ಅಪ್ಪಣ್ಣ ಉಪಸ್ಥಿತರಿದ್ದರು.