ಸೋಮವಾರಪೇಟೆ, ಆ. ೨೮: ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಇಫಾ), ಪ್ರಣವ್ ಫೌಂಡೇಶನ್ ಮತ್ತು ಆರ್. ವಿ ಟ್ರಸ್ಟ್ ಸಹಯೋಗದಲ್ಲಿ 'ಪುಸ್ತಕ-೨೦೨೪' ಕಾರ್ಯಕ್ರಮದಡಿ ಸ್ಥಳೀಯ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಶಾಂತಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಕಿಟ್ ವಿತರಿಸಲಾಯಿತು.

ಯಂಗ್ ಇಂಡಿಯನ್ ಫಾರ್ಮರ್ಸ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕಳೆದ ನಾಲ್ಕು ವರ್ಷದಿಂದ ಪ್ರಣವ್ ಫೌಂಡೇಶನ್ ಮತ್ತು ಇಫಾ ಸಂಘಟನೆ ಹಲವಾರು ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿ ಕೊಂಡು ಬರುತ್ತಿದ್ದು, ಇದರೊಂದಿಗೆ ಬಡ ಮಕ್ಕಳ ಶಿಕ್ಷಣಕ್ಕಾಗಿಯೂ ಶ್ರಮಿಸುತ್ತಿದೆ ಎಂದರು.

ಪ್ರಣವ್ ಫೌಂಡೇಶನ್ ಅಧ್ಯಕ್ಷ ರಾಕೇಶ್ ರೈ ಮಾತನಾಡಿ, ಪ್ರಸಕ್ತ ವರ್ಷ ೫,೦೦೦ ಶಾಲಾ ಮಕ್ಕಳಿಗೆ ಪುಸ್ತಕ ಕಿಟ್ ನೀಡುವ ಗುರಿ ಇದ್ದು, ಈಗಾಗಲೇ ನಾಲ್ಕು ಸಾವಿರ ಕಿಟ್ ವಿತರಿಸಲಾಗಿದೆ ಎಂದರು.

ಬಳಗುAದ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಮಾಜಿ ಅಧ್ಯಕ್ಷ ಪ್ರಶಾಂತ್, ಸದಸ್ಯ ತಿಮ್ಮಪ್ಪ ನಾಯಕ್, ಎಸ್ ಡಿಎಂಸಿ ಅಧ್ಯಕ್ಷ ರಶೀದ್, ಪಿಡಿಓ ಮೋಹನ್ ಸೇರಿದಂತೆ ಶಿಕ್ಷಕರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಂತಳ್ಳಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಎಸ್.ಜಿ. ಮೇದಪ್ಪ, ಶಿಕ್ಷಣಾಧಿಕಾರಿ ಚೈತ್ರ, ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್, ಮುಖ್ಯೋಪಾಧ್ಯಾಯರಾದ ಪರಮೇಶ್, ಇಫಾ ಕಾರ್ಯದರ್ಶಿ ಸಜನ್ ಮಂದಣ್ಣ, ಸದಸ್ಯರಾದ ಆದರ್ಶ ತಮ್ಮಯ್ಯ, ಪ್ರೇಮ್ ಸಾಗರ್, ರಕ್ಷಿತ್ ಉಪಸ್ಥಿತರಿದ್ದರು.