ಸಿದ್ದಾಪುರ, ಆ. ೨೯: ಅತ್ಯಂತ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಕಳೆದ ಕೆಲವು ತಿಂಗಳುಗಳಿAದ ವಿದ್ಯುತ್ ಸಂಪರ್ಕ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಸಿದ್ದಾಪುರ, ಗುಹ್ಯ, ಕರಡಿಗೋಡು, ನೆಲ್ಯಹುದಿಕೇರಿ, ಅಮ್ಮತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗಿರುವ ಏಕೈಕ ಸರಕಾರಿ ಆಸ್ಪತ್ರೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರವಾಗಿದೆ. ಸುಮಾರು ೪೦ ಸಾವಿರ ಮಂದಿ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಹಾಗಾಗಿ ಪ್ರತಿದಿನ ನೂರಾರು ಮಂದಿ ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ಆಗಮಿಸುತ್ತಾರೆ.

ಇಲ್ಲಿಯ ಪ್ರಯೋಗಾಲಯದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ವೈದ್ಯರು ಸೂಚಿಸುವ ಪರೀಕ್ಷೆಗಳನ್ನು ಮಾಡಲು ರೋಗಿಗಳು ಖಾಸಗಿ ಪ್ರಯೋಗಾಲಯಗಳನ್ನು ಅವಲಂಬಿಸಬೇಕಾ ಗಿದೆ. ಬಡ ಕಾರ್ಮಿಕ ವರ್ಗದ ರೋಗಿಗಳಿಗೆ ಖಾಸಗಿ ಪ್ರಯೋಗಾಲಯಗಳಲ್ಲಿ ದುಬಾರಿ ಹಣ ನೀಡಿ ಪರೀಕ್ಷೆ ಮಾಡಲು ಸಾಧ್ಯವಾಗದೆ ಪರದಾಡುವಂತಾಗಿದೆ. "ತಾತ್ಕಾಲಿಕವಾಗಿ ಕರೆಂಟ್ ಇಲ್ಲದ ಕಾರಣ ರೋಗಿಗಳು ಸಹಕರಿಸಬೇಕಾಗಿ ವಿನಂತಿ" ಎಂದು ಸಮುದಾಯ ಆರೋಗ್ಯ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕೇಂದ್ರದ ಪ್ರಯೋಗಾಲಯದ ಗೋಡೆಯಲ್ಲಿ ಭಿತ್ತಿ ಪತ್ರ ಅಂಟಿಸಲಾಗಿದೆ. ಕೆಲವು ಪರೀಕ್ಷೆಗಳು ಮಾತ್ರ ಇಲ್ಲಿ ಮಾಡಲಾಗುತ್ತಿದೆ.

ಎಕ್ಸ್-ರೇ ಯಂತ್ರ ಇದ್ದರೂ ಸೌಲಭ್ಯ ಇಲ್ಲ

ಪ್ರಯೋಗಾಲಯದ ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಇರುವುದರಿಂದ ಎಕ್ಸ್-ರೇ ಕೊಠಡಿಯಲ್ಲೂ ವಿದ್ಯುತ್ ಸಂಪರ್ಕ ಕಡಿತವಾಗಿ ತಿಂಗಳುಗಳು ಕಳೆದಿದೆ. ಕೊಠಡಿಯಲ್ಲಿ ಎಕ್ಸ್-ರೇ ಯಂತ್ರಗಳಿದ್ದರೂ ರೋಗಿಗಳಿಗೆ ಸೌಲಭ್ಯ ಮಾತ್ರ ಲಭ್ಯವಾಗುತ್ತಿಲ್ಲ.

ಈಗಾಗಲೇ ವಿದ್ಯುತ್ ಸಮಸ್ಯೆ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕೆಲಸಗಳಿದ್ದರೆ ಅದಕ್ಕೆ ಟೆಂಡರ್ ಕರೆಯಬೇಕಾಗುತ್ತದೆ. ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಕೆಲಸ ಪೂರ್ಣಗೊಳಿಸುವ ಸಲುವಾಗಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಶಕ್ತಿಗೆ ಮಾಹಿತಿ ನೀಡಿದರು. - ಎ.ಎಸ್. ಮುಸ್ತಫಾ