ಮಡಿಕೇರಿ, ಆ. ೨೯: ಸ್ವಂತ ಉದ್ಯಮವನ್ನು ಆರಂಭಿಸುವ ಮೂಲಕ ಜನತೆಯ ಆರ್ಥಿಕ ಸ್ಥಿತಿ ಸುಧಾರಣೆಯಾದರೆ ವಿಕಸಿತ ಭಾರತ ನಿರ್ಮಾಣ ಸಾಧ್ಯ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ಅವರು ಅಭಿಪ್ರಾಯಪಟ್ಟರು. ಮಡಿಕೇರಿ ಗಾಂಧಿ ಭವನದಲ್ಲಿ ನಡೆದ ಖಾದಿ ಗ್ರಾಮೋದ್ಯೋಗ ಆಯೋಗ ಕರ್ನಾಟಕ ಸರ್ಕಾರ ಮತ್ತು ಮೈಸೂರಿನ ಸರ್ವೋದಯ ಚಾರಿಟೇಬಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಅರಿವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದ ೩೧ ಜಿಲ್ಲೆಗಳ ಪೈಕಿ ಕೊಡಗಿನಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಸರ್ಕಾರಗಳ ಯೋಜನೆಗಳ ಸೌಲಭ್ಯವನ್ನು ಪಡೆಯಲು ಹಿಂದೇಟು ಹಾಕುವುದು ಕಂಡುಬರುತ್ತಿದೆ. ಸ್ವ ಉದ್ಯೋಗ ಕೈಗೊಳ್ಳುವುದರಿಂದ ದೇಶಕ್ಕೂ ಲಾಭವಿದೆ, ದೇಶದ ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ. ಬ್ಯಾಂಕ್ ಜೊತೆಗೆ ವ್ಯವಹಾರ ಮಾಡುವಾಗ ಆರ್ಥಿಕ ಶಿಸ್ತು ಮುಖ್ಯ, ಸ್ವ ಉದ್ಯೋಗ ಕೈಗೊಳ್ಳುವುದರಿಂದ ಉದ್ಯಮಿಯಾಗಿ ಬೆಳೆದು ಆರ್ಥಿಕವಾಗಿ ಪ್ರಗತಿ ಹೊಂದಬಹುದು. ಪ್ರತಿಯೊಬ್ಬರೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಂಡು ಸ್ವಾವಲಂಬಿಗಳಾಗಬೇಕೆAದು ಕರೆ ನೀಡಿದರು.

ಖಾದಿ ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ರಾಮಕೃಷ್ಣ ಆಚಾರ್ ಮಾತನಾಡಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ಎರಡು ವಿಧದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಪ್ರಧಾನಮಂತ್ರಿ ಸ್ವಉದ್ಯೋಗ ಯೋಜನೆಯಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಬೆಂಗಳೂರಿನ ಖಾದಿ ಗ್ರಾಮೋದ್ಯೋಗ ಇಲಾಖೆಯ ಸಹಾಯಕ ನಿರ್ದೇಶಕ ವಿ.ಆರ್ ಮರಾಠಿ ಮಾತನಾಡಿ ಪ್ರಧಾನಮಂತ್ರಿ ಸ್ವ ಉದ್ಯೋಗ ಯೋಜನೆಯ ಸೌಲಭ್ಯವು ಕೊಡಗಿನಲ್ಲಿ ಕಾರ್ಯಗತಗೊಂಡಿರುವುದು ಕಡಿಮೆ ಪ್ರಮಾಣದಲ್ಲಿದೆ ಎಂದರು. ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಸೇವಾ ಭಾರತಿ ಕಾರ್ಯದರ್ಶಿ ಡಿ ಎಚ್ ತಮ್ಮಪ್ಪ ಮಾತನಾಡಿದರು.

ಸರ್ವೋದಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ರಿಪಬ್ಲಿಕ್ ಸೇನೆ ರೈತ ಘಟಕದ ಅಧ್ಯಕ್ಷ ಮಹಾದೇವ್ ಇದ್ದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಸಕ್ತ ಫಲಾನುಭವಿಗಳು ಆಗಮಿಸಿದ್ದರು. ನಾಗರತ್ನ ಕಾರ್ಯಕ್ರಮ ನಿರೂಪಿಸಿದರೆ, ದಿವ್ಯ ಪ್ರಾರ್ಥಿಸಿದರು. ಟ್ರಸ್ಟ್ ನಿರ್ದೇಶಕಿ ಭಾಗ್ಯರಾಜೇಶ್ ಸ್ವಾಗತಿಸಿ, ರಾಜೇಶ್ ವಂದಿಸಿದರು.