ಕಣಿವೆ, ಆ. ೩೦: ಕೊಡಗು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರಾದ ಡಾ. ಸೀನಪ್ಪ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರು ಜ್ಞಾನ, ವ್ಯಕ್ತಿತ್ವ, ಕೌಶಲ್ಯ ಮತ್ತು ವಿವೇಕ ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ವ್ಯಕ್ತಿ ಗೌರವಿಸಲ್ಪಡುತ್ತಾನೆ. ಅವಿರತ ಪರಿಶ್ರಮ, ನಿಷ್ಠೆ, ಪಾರದರ್ಶಕ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿದರೆ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯ. ಡಾ. ಸೀನಪ್ಪ ಅವರು ಒಂದೂವರೆ ವರ್ಷದ ಅವಧಿಯಲ್ಲಿ ಬಹಳಷ್ಟು ಉತ್ತಮ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ. ಸೀನಪ್ಪ ಅವರು, ಕೊಡಗು ವಿಶ್ವವಿದ್ಯಾಲಯದ ಕುಲಸಚಿವನಾಗಿ ನನಗೆ ಸಿಕ್ಕಂತಹ ಈ ಅವಧಿಯಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಸ್ನಾತಕ ಪದವಿ ಪರೀಕ್ಷೆಗಳು ಮುಗಿದ ಕೇವಲ ೨೪ ಗಂಟೆಯಲ್ಲಿ ಸ್ನಾತಕ ಪದವಿಯ ಫಲಿತಾಂಶವನ್ನು ಪ್ರಕಟಿಸಿದ ಹೆಗ್ಗಳಿಕೆಗೆ ವಿಶ್ವವಿದ್ಯಾಲಯವು ಪಾತ್ರವಾಗಲು ಸಾಧ್ಯವಾಯಿತು. ಈ ವಿಶ್ವವಿದ್ಯಾಲಯ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಹೊಂದಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ನೂತನ ಕುಲಸಚಿವರು (ಮೌಲ್ಯಮಾಪನ) ಆದ ಪ್ರೊ. ಸುರೇಶ್ ಎಂ. ಅವರು ಮಾತನಾಡಿದರು. ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್ ಎಂ.ಎನ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.