ಶನಿವಾರಸಂತೆ, ಆ. ೩೦: ಸಮೀಪದ ಕೊಡ್ಲಿಪೇಟೆಯ ಉಪ ಪೊಲೀಸ್ ಠಾಣೆಗೆ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಡಾ. ಬೋರಲಿಂಗಯ್ಯ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆೆ ಆಲಿಸಿದರು.

ಪೊಲೀಸ್ ಠಾಣೆ ಬಹಳ ಹಳೆಯ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ನೂತನ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ, ಶಿಥಿಲಾವಸ್ಥೆಯಲ್ಲಿದ್ದು, ಪೊಲೀಸ್ ಸಿಬ್ಬಂದಿ ವಸತಿ ಗೃಹಗಳನ್ನು ಸಂಪೂರ್ಣ ತೆರವುಗೊಳಿಸಿ ನೂತನ ವಸತಿ ಗೃಹ ನಿರ್ಮಿಸುವ ಬಗ್ಗೆ ಹಾಗೂ ಕೊಡ್ಲಿಪೇಟೆ ಕೊಡಗು ಜಿಲ್ಲೆಯ ಗಡಿಭಾಗವಾಗಿರುವ ಕಾರಣ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸಾರ್ವಜನಿಕರು ಮನವಿ ಮಾಡಿ ಆಗ್ರಹಿಸಿದರು.

ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಅರಿವು ಕಾರ್ಯಕ್ರಮಕ್ಕೆ ಆಗಮಿಸಿದ್ದ ಐ.ಜಿ.ಪಿ. ಡಾ. ಬೋರಲಿಂಗಯ್ಯ ಸಾರ್ವಜನಿಕರ ಮನವಿಗೆ ಸ್ಪಂದಿಸಿ ಉಪ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅವರು ಮಾತನಾಡಿ, ಉಪ ಪೊಲೀಸ್ ಠಾಣೆಯನ್ನು ಉನ್ನತೀಕರಿಸುವ ಹಾಗೂ ನೂತನ ವಸತಿ ಗೃಹ ನಿರ್ಮಿಸುವ ಬಗ್ಗೆ ಇಲಾಖೆ ಯೋಜನೆ ರೂಪಿಸಿ ಸಿದ್ಧಪಡಿಸುವುದು ಎಂದರು. ಅಲ್ಲದೇ ಅಸ್ಸಾಂ ರಾಜ್ಯ ಮತ್ತು ಬಾಂಗ್ಲ ದೇಶದ ಅಕ್ರಮ ವಲಸೆ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಿಟ್ಟು ಕೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಕಟ್ಟಡ ನಿರ್ಮಾಣದ ಬಗ್ಗೆ ಇಲಾಖೆಯಿಂದ ಯೋಜನೆ ಮತ್ತು ಅಂದಾಜುಪಟ್ಟಿ ಸಿದ್ಧಪಡಿಸಿ ಕಳುಹಿಸಿದರೆ ಅದನ್ನು ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ಗಮನಕ್ಕೆ ತಂದು ಮಂಜೂರು ಮಾಡಿಸಲು ಸಹಕರಿಸುವ ಭರವಸೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಸೋಮವಾರಪೇಟೆ ವಿಭಾಗದ ಡಿ.ವೈ.ಎಸ್.ಪಿ. ಗಂಗಾಧರಪ್ಪ, ಶನಿವಾರಸಂತೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಪ್ರೀತಮ್ ಡಿ. ಶ್ರೇಯಕರ್, ಪೊಲೀಸ್ ಸಿಬ್ಬಂದಿ, ಮುಖಂಡರಾದ ಡಾ. ಉದಯಕುಮಾರ್, ಡಿ.ಆರ್. ವೇದಕುಮಾರ್, ಬಿ.ಕೆ. ಯತೀಶ್, ಎಂ. ಹನೀಫ್, ಮೋಹನ್ ಮೌರ್ಯ ಇತರರು ಹಾಜರಿದ್ದರು.