ವೀರಾಜಪೇಟೆ, ಆ. ೩೦: ಸರ್ಕಾರಗಳು ಹಿಂದುಳಿದ ವರ್ಗದ ಶ್ರಮಿಕ ಸಮಾಜ ಬಿಲ್ಲವ ಸಮಾಜವನ್ನು ಕಡೆಗಣಿಸುತ್ತಿದ್ದು ನಮ್ಮ ಸಮಾಜಕ್ಕೆ ಪೂರಕವಾದ ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ ಗಣೇಶ್ ಆರೋಪಿಸಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಟ್ಟಿಯಲ್ಲಿರುವ ಬಿಲ್ಲವ ಸೇವಾ ಸಮಾಜದಲ್ಲಿ ಶ್ರೀ ನಾರಾಯಣ ಗುರುಗಳ ೧೭೦ನೇ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಜಾತಿ, ಮತ, ಬೇದ ಇಲ್ಲದೆ ಶ್ರೀ ನಾರಾಯಣ ಗುರುಗಳ ತತ್ವ, ಆದರ್ಶ ಗುಣಗಳನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ವೀರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜ ಅಂಬಟ್ಟಿಯಲ್ಲಿ ಒಂದು ಎಕರೆ ಜಾಗವನ್ನು ಹೊಂದಿದ್ದು ಜನಾಂಗ ಬಾಂಧವರಿಗಾಗಿ ಒಂದು ಸಮುದಾಯ ಭವನವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ೨೦೨೨-೨೩ ನೇ ಸಾಲಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ವಿರಾಜಪೇಟೆ ಬಿಲ್ಲವ ಸೇವಾ ಸಮಾಜಕ್ಕೆ ರೂ. ೫೦ ಲಕ್ಷ ಬಿಡುಗಡೆಗೊಂಡಿದೆ. ನಂತರದ ದಿನಗಳಲ್ಲಿ ಬಿಲ್ಲವ ಸೇವಾ ಸಮಾಜಕ್ಕೆ ಬಿಡುಗಡೆಗೊಂಡ ಹಣಕ್ಕೆ ತಾಂತ್ರಿಕ ಕಾರಣ ಒಡ್ಡಿ ತಡೆ ಹಿಡಿಯಲಾಗಿದೆ. ಅದೇ ಹಿಂದುಳಿದ ವರ್ಗಗಳ ನಿಗಮದಿಂದ ಬೇರೆ ಸಮುದಾಯಗಳಿಗೆ ಹಣ ಬಿಡುಗಡೆಗೊಳಿಸಲಾಗಿದೆ. ಅನುದಾನ ತಡೆ ಹಿಡಿದಿರುವ ಬಗ್ಗೆ ಇನ್ನು ಕಾರಣ ತಿಳಿದು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಪಿ.ಯು.ಸಿಯಲ್ಲಿ ಶೇ ೮೦ ಕ್ಕಿಂತ ಹೆಚ್ಚು ಅಂಕ ಪಡೆದ ತನಿಷಾ ಬಿ.ಎ, ಗ್ರೀಷ್ಮಾ ಬಿ.ವಿ., ಎಸ್.ಎಸ್.ಎಲ್.ಸಿ.ಯಲ್ಲಿ ಶೇ ೮೦ ಕ್ಕಿಂತ ಹೆಚ್ಚು ಅಂಕ ಪಡೆದ ಹರ್ಷಿತಾ ಬಿ.ಜಿ, ನಿಶ್ಚಲ್ ಬಿ.ಡಿ, ಕೌಶಿಕ್ ಬಿ.ಕೆ, ಭೂಮಿಕ ಬಿ.ಎಸ್, ರಚನಾ ಬಿ.ಆರ್, ಅಶಿಲೇಷ್‌ಬಿ.ಜಿ, ದಿಲನ್ ಬಿ.ಎಚ್, ನಿಕಿತಾ ಸುವರ್ಣ ಬಿ.ಜೆ, ಅಭಿಜ್ಞ ಪಿ.ಜೆ, ರಕ್ಷತಾ ಬಿ.ಆರ್, ವರ್ಷ ಬಿ.ಪಿ, ಜೀವಿತಾಂಚನ್ ಬಿ.ಎಸ್ ಇವರುಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ಬಿಲ್ಲವ ಸೇವಾ ಸಮಾಜದ ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಜನಾರ್ಧನ್, ಗೌರವ ಅಧ್ಯಕ್ಷ ಬಿ.ಆರ್ ರಾಜಾ, ನಾರಾಯಣ ಗುರು ಪ್ರತಿಮೆ ದಾನಿ ಬಿ.ಎಸ್ ನಾರಾಯಣ್, ಮಾಜಿ ಸರ್ಕಾರಿ ಅಭಿಯೋಜಕ ಅಮೃತ್ ಸೋಮಯ್ಯ, ಕೆಡಿಸಿಸಿ ಬ್ಯಾಂಕ್ ನಿವೃತ ಅಧಿಕಾರಿ ಎನ್.ಕೆ ಮೋಹನ್, ಖಜಾಂಚಿ ಸತೀಶ್ ಪೂಜಾರಿ ಉಪಸ್ಥಿತರಿದ್ದರು.