ವೀರಾಜಪೇಟೆ, ಆ. ೩೦ : ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ, ಅರ್ಥಶಾಸ್ತç ವಿಭಾಗ ಹಾಗೂ ವಿವೇಕ ಬಳಗದ ಸಂಯುಕ್ತ ಆಶ್ರಯದಲ್ಲಿ ಪುಣ್ಯಭೂಮಿ ಭಾರತದ ಮಹಿಮೆ ಎಂಬ ವಿಚಾರದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಉಡುಪಿ ಡಿವೈನ್ ಪಾರ್ಕ್ನ ಯಶವಂತ್ ಡಿ. ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಭವ್ಯ ಭಾರತದ ಮಹಿಮೆಯನ್ನು, ಭಾರತದ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ಮುಟ್ಟಿಸಿದ ಸ್ವಾಮಿ ವಿವೇಕಾನಂದರ ದಿವ್ಯ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರತಿಯೊಬ್ಬರು ಭಾರತದ ಮಹಿಮೆಯನ್ನು ಗೌರವಿಸಬೇಕು. ಭಾರತೀಯ ಆಚಾರ ವಿಚಾರ, ಸಂಸ್ಕೃತಿಯನ್ನು ಪಾಲಿಸಬೇಕು ಎಂದು ಹೇಳಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಬಸವರಾಜು ಮಾತನಾಡಿ ನಾವೆಲ್ಲರೂ ಭಾರತೀಯರು. ನಮ್ಮಲ್ಲಿ ಯಾವುದೇ ಜಾತಿ, ಮತ, ಪಂಥ, ಭಾಷೆಯ ಆಧಾರದ ಮೇಲೆ ಭಿನ್ನತೆ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಮಾತನಾಡಿ ಪ್ರತಿಯೊಬ್ಬರಿಗೂ ದೇಶದ ಮೇಲೆ ಪ್ರೀತಿ ಇರಬೇಕು ಎಂದರು. ವೇದಿಕೆಯಲ್ಲಿ ವೀರಾಜಪೇಟೆ ವಿವೇಕ ಬಳಗದ ಕುಮಾರ, ಶಶಿಕಲಾ ಭಾಸ್ಕರ್, ಅರ್ಥಶಾಸ್ತç ಉಪನ್ಯಾಸಕರಾದ ವೀಣಾ, ಗೀತಾರವರು ಉಪಸ್ಥಿತರಿದ್ದರು.