೩೦ ದಿನಗಳಲ್ಲಿ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ

ಬೆಂಗಳೂರು, ಆ. ೩೦: ಗ್ರಾಹಕರು ಬಿಲ್‌ಗಳನ್ನು ಸ್ವೀಕರಿಸಿದ ೩೦ ದಿನಗಳಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸಲು ವಿಫಲವಾದರೆ ಅಥವಾ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೆ ಸೆಪ್ಟೆಂಬರ್ ೧ ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಶುಕ್ರವಾರ ತಿಳಿಸಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಶಿಫಾರಸಿನಂತೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆಪ್ಟೆಂಬರ್ ೧ ರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಬೆಸ್ಕಾಂ ತಿಳಿಸಿದೆ. ಮನೆ ಬಳಕೆ ಮತ್ತು ವಾಣಿಜ್ಯ ಬಳಕೆ ಗ್ರಾಹಕರು, ಅಪಾರ್ಟ್ಮೆಂಟ್‌ಗಳು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಬಿಲ್‌ಗಳನ್ನು ನಿಗದಿತ ೩೦ ದಿನಗಳಲ್ಲಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬೆಸ್ಕಾಂ ಹೇಳಿದೆ. ೩೦ ದಿನಗಳಲ್ಲಿ ಬಿಲ್ ಪಾವತಿಸಲು ವಿಫಲವಾದರೆ ಮೀಟರ್ ರೀಡಿಂಗ್ ದಿನದಂದು ಸಂಪರ್ಕ ಕಡಿತಗೊಳ್ಳುತ್ತದೆ. ಈ ಅನಾನುಕೂಲತೆಯನ್ನು ತಪ್ಪಿಸಲು ಎಲ್ಲಾ ಗ್ರಾಹಕರು ತಮ್ಮ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಎಂದು ಬೆಸ್ಕಾಂ ಕೇಳಿಕೊಂಡಿದೆ.

ಓಮಾನ್‌ನಲ್ಲಿ ಅಪಘಾತ: ಬೆಳಗಾವಿ ಮೂಲದ ನಾಲ್ವರು ಸಜೀವ ದಹನ

ಬೆಳಗಾವಿ, ಆ. ೩೦: ಓಮಾನ್ ದೇಶದ ಹೈಮಾ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ವಿಜಯಾ ತಹಶೀಲ್ದಾರ್, ಪೂಜಾ, ಪವನ್ ಕುಮಾರ ಮತ್ತು ಆದಿಶೇಷ ಮೃತಪಟ್ಟವರಾಗಿದ್ದಾರೆ. ಈ ನಾಲ್ವರು ಓಮಾನ್‌ಗೆ ಪ್ರವಾಸಕ್ಕೆ ತೆರಳಿದ್ದರು. ಹೈಮಾ ಎಂಬ ಪ್ರದೇಶದಲ್ಲಿ ಹೋಗುತ್ತಿದ್ದ ವೇಳೆ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡು, ನಾಲ್ವರು ಸಜೀವ ದಹನವಾಗಿದ್ದಾರೆ. ಮೃತರ ಶವಗಳನ್ನು ಭಾರತಕ್ಕೆ ತರಲು ವಿದೇಶಾಂಗ ಇಲಾಖೆ ಮೂಲಕ ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಬಿ. ಕಡಾಡಿ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯದ ಬಗ್ಗೆ ತನಿಖೆ

ಬೆಂಗಳೂರು, ಆ. ೩೦: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಶುಕ್ರವಾರ ಹೇಳಿದ್ದಾರೆ. ಕೆಲವು ಕೈದಿಗಳು ಮತ್ತು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೆಲವು ಕೈದಿಗಳಿಗೆ, ಉದಾಹರಣೆಗೆ ನಟ ದರ್ಶನ್ ತೂಗುದೀಪ ಅವರಿಗೆ ರಾಜಾತಿಥ್ಯ ನೀಡಿದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರು ರೌಡಿಶೀಟರ್ ಸೇರಿದಂತೆ ಮೂವರೊಂದಿಗೆ ಜೈಲಿನ ಹುಲ್ಲುಹಾಸಿನ ಮೇಲೆ, ರಿಲ್ಯಾಕ್ಸ್ ಮೂಡ್‌ನಲ್ಲಿ, ಕುರ್ಚಿಯ ಮೇಲೆ ಕುಳಿತು ಸಿಗರೇಟ್ ಮತ್ತು ಕಾಫಿ ಕುಡಿಯುತ್ತಿರುವ ಫೋಟೋ ಭಾರಿ ವೈರಲ್ ಆಗಿತ್ತು. ಅಲ್ಲದೆ, ದರ್ಶನ್ ಜೈಲಿನಿಂದ ವೀಡಿಯೋ ಕಾಲ್ ಮೂಲಕ ವ್ಯಕ್ತಿಯೊಬ್ಬನೊಂದಿಗೆ ಮಾತನಾಡಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ, ಕೇಂದ್ರ ಕಾರಾಗೃಹದಲ್ಲಿ ನಡೆದಿರುವ ವಿವಿಧ ಅಕ್ರಮಗಳ ಕುರಿತು ಮೂರು ಪ್ರಕರಣಗಳು ದಾಖಲಾಗಿದ್ದು, ಅಲ್ಲಿನ ಕೈದಿಗಳ ವಿರುದ್ಧ ಎರಡು ಪ್ರಕರಣಗಳು ಮತ್ತು ಮೂರನೇ ಪ್ರಕರಣ ಜೈಲು ಅಧಿಕಾರಿಗಳ ವಿರುದ್ಧ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ.

ಹೊಸಕೋಟೆಯಲ್ಲಿ ನಾಡಬಾಂಬ್ ಸ್ಫೋಟ; ಮಗ ಸಾವು, ತಂದೆ ಗಂಭೀರ

ಬೆAಗಳೂರು, ಆ. ೩೦: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ನಾಡಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ೧೯ ವರ್ಷದ ಯುವಕ ಮೃತಪಟ್ಟಿದ್ದು, ಆತನ ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ಯುವಕನನ್ನು ದೊಡ್ಡನಲ್ಲಾಳ ಗ್ರಾಮದ ಪವನ್ (೧೯) ಎಂದು ಗುರುತಿಸಲಾಗಿದೆ. ಸ್ಫೋಟದ ರಭಸಕ್ಕೆ ಮನೆಯ ಮೇಲ್ವಾವಣಿ ಛಿದ್ರ ಛಿದ್ರವಾಗಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ನಾಡಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಟೋಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೊಡ್ಮನೆಗೂ ತಟ್ಟಿದ ಡೀಪ್‌ಫೇಕ್ ಬಿಸಿ; ಅಶ್ವಿನಿ ಪುನೀತ್ ರಾಜ್ ಕುಮಾರ್ ವೀಡಿಯೋ ವೈರಲ್

ಬೆಂಗಳೂರು, ಆ. ೩೦: ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ನಟಿಯರನ್ನು ಇನ್ನಿಲ್ಲದಂತೆ ಕಾಡಿದ್ದ ಡೀಪ್‌ಫೇಕ್ ಭೂತ ಇದೀಗ ಕನ್ನಡ ಚಿತ್ರರಂಗದ ದೊಡ್ಮನೆಗೂ ಕಾಡಲಾರಂಭಿಸಿದ್ದು, ಕಿಡಿಗೇಡಿಯೋರ್ವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ವಿಡಿಯೋ ಅಪ್ಲೋಡ್ ಮಾಡಿ ಕುಕೃತ್ಯ ಮೆರೆದಿದ್ದಾನೆ. ಯೋಗೇಂದ್ರ ಪ್ರಸಾದ್ ಎಂಬ ಟ್ವಿಟರ್ ಖಾತೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಡೀಪ್‌ಫೇಕ್ ವೀಡಿಯೋ ಹಂಚಿಕೊಳ್ಳಲಾಗಿದ್ದು, ವೀಡಿಯೋ ಪೋಸ್ಟ್ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಳಮಟ್ಟದ ಭಾಷೆ ಬಳಸಿದ್ದಾನೆ. ಅಶ್ವಿನಿ ಪುನೀತ್ ರಾಜ್ ಕುಮಾರ್‌ಗೆ ಬಾಳು ಕೊಡಲು ನಿರ್ಧರಿಸಿದ್ದೇನೆ ೨೯ ಅಕ್ಟೋಬರ್ ೨೦೨೪ ರಂದು ನಾನು ವಿವಾಹವಾಗಲಿದ್ದೇನೆ ದಯವಿಟ್ಟು ಅಪ್ಪು ಬಾಸ್ ಅಭಿಮಾನಿಗಳು ರಾಜವಂಶ ಅಭಿಮಾನಿಗಳು ಎಲ್ಲರೂ ಬಂದು ಆಶೀರ್ವಾದ ಮಾಡಬೇಕು ಎಂದು ನಮ್ಮ ಸವಿನಯ ಆಮಂತ್ರಣ. ಸ್ಥಳ ` ಶ್ರೀ ಕಂಠೀರವನಗರ ಸ್ಟುಡಿಯೋಸ್, ನಾರ್ತ್ ವೆಸ್ಟ್ ಬೆಂಗಳೂರು ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಅಲ್ಲದೇ ನೇರವಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೇ ಟ್ಯಾಗ್ ಮಾಡಿದ್ದಾನೆ. ಕಿಡಿಗೇಡಿಯ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಡೀಪ್‌ಫೇಕ್ ವಿಡಿಯೋ ನೋಡಿ ಕಿಡಿಕಾರಿರುವ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಕೂಡಲೇ ಈ ದುರುಳನನ್ನು ಬಂಧಿಸುವAತೆ ಆಗ್ರಹಿಸಿದ್ದಾರೆ.