ಗೋಣಿಕೊಪ್ಪಲು, ಆ. ೩೦: ಗೋಣಿಕೊಪ್ಪದಲ್ಲಿ ವಾಹನ ದಟ್ಟಣೆ ನಿಯಂತ್ರಣದೊAದಿಗೆ ಅಗತ್ಯವಿರುವ ಟ್ರಾಫಿಕ್ ವ್ಯವಸ್ಥೆಗಳನ್ನು ನಾಗರಿಕರಿಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಮುದೋಳ್, ನೂತನ ಸಬ್‌ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಹಾಗೂ ಅಧಿಕಾರಿಗಳು ವ್ಯವಸ್ಥೆಯ ಬಗ್ಗೆ ಅವಲೋಕಿಸಿದರು. ನಗರದಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾವೇ ಖುದ್ದಾಗಿ ಸಂಚಾರ ನಡೆಸಿ ಟ್ರಾಫಿಕ್ ವ್ಯವಸ್ಥೆಗೆ ಬೇಕಾಗುವ ಮಾರ್ಕಿಂಗ್ ಲೈನ್‌ಗಳನ್ನು ಆರಂಭಿಸುವ ಕುರಿತು ಸರ್ವೆ ಕಾರ್ಯ ನಡೆಸಿದರು.

ನಗರದಲ್ಲಿ ವಾಹನಗಳು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು. ಅಲ್ಲದೆ ಇವುಗಳಿಗೆ ಕಡಿವಾಣ ಹಾಕುವ ಸಲುವಾಗಿ ನೂತನ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುದೋಳ್ ನಗರದ ಪೊನ್ನಂಪೇಟೆ ಜಂಕ್ಷನ್‌ನಿAದ ಉಮಾಮಹೇಶ್ವರಿ ದೇವಾಲಯದವರೆಗೂ ಸಂಚಾರ ನಡೆಸಿ ವಸ್ತು ಸ್ಥಿತಿಯ ಬಗ್ಗೆ ಅವಲೋಕನ ನಡೆಸಿದರು.

ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಯೊಂದಿಗೆ ಸರ್ವೆ ಕಾರ್ಯ ನಡೆಸಿ, ದ್ವಿಚಕ್ರ ಹಾಗೂ ೪ ಚಕ್ರಗಳ ವಾಹನಗಳಿಗೆ ಅಗತ್ಯವಿರುವ ಪಾರ್ಕಿಂಗ್ ಸ್ಥಳದ ಬಗ್ಗೆ ಮಾರ್ಕಿಂಗ್ ಮಾಡಿಸಿದರು. ನಗರದಲ್ಲಿನ ಮುಖ್ಯ ರಸ್ತೆಯಲ್ಲಿ ನಿಲುಗಡೆಗೊಂಡಿರುವ ಆಟೋ ನಿಲ್ದಾಣಗಳಿಗೆ ತೆರಳಿ ಟ್ರಾಫಿಕ್ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುವಂತೆ ಸೂಚನೆ ನೀಡಿದರು. ನಿಗದಿತ ಸ್ಥಳದಲ್ಲಿಯೇ ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳ ನಿಗಧಿಪಡಿಸಿದರು.

ರಸ್ತೆ ಬದಿಯಲ್ಲಿರುವ ಟಯರ್ ಶಾಪ್ ಹಾಗೂ ವರ್ಕ್ ಶಾಪ್‌ಗಳಿಗೆ ಸೂಚನೆ ನೀಡಿ ತಮ್ಮಲ್ಲಿಗೆ ಬರುವ ವಾಹನಗಳನ್ನು ಅಂಗಡಿಯ ಒಳ ಭಾಗದಲ್ಲಿ ನಿಲ್ಲಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ರಸ್ತೆ ಬದಿಯಲ್ಲಿಯೇ,ರಿಪೇರಿ ಮಾಡುವುದು,ಟಯರ್‌ಗಳನ್ನು ಶೇಖರಿಸಿಡುವುದು ಅಲ್ಲದೆ ರಸ್ತೆಯಲ್ಲಿಯೇ ವಾಹನಗಳಿಗೆ ಗಾಳಿ ಹಾಕುವುದು ಪಾರ್ಕಿಂಗ್ ಸ್ಥಳದಲ್ಲಿ ರಿಪೇರಿ ಮಾಡುವುದು ಹಾಗೂ ಜಾಗವನ್ನು ಅತಿಕ್ರಮಣ ಮಾಡುವುದು ಇನ್ನು ಮುಂದಕ್ಕೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.

ರಸ್ತೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ರಿಪೇರಿ ಮಾಡುವುದು ಇದರಿಂದ ಸಾರ್ವಜನಿಕರ ವಾಹನ ಓಡಾಟಕ್ಕೆ ಅಡಚಣೆ ಮಾಡುವುದನ್ನು ಗಮನಿಸಿದ ವೃತ್ತ ನಿರೀಕ್ಷಕರು ಇಂತಹವರಿಗೆ ಪೊಲೀಸ್ ಠಾಣೆಯ ವತಿಯಿಂದ ನೋಟಿಸ್ ಜಾರಿಗೊಳಿಸುವಂತೆ ಸ್ಥಳದಲ್ಲಿದ್ದ ಠಾಣಾಧಿಕಾರಿ ಪ್ರದೀಪ್ ಕುಮಾರ್ ಅವರಿಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷÀ ಕಡೆಮಾಡ ಸುನೀಲ್ ಮಾದಪ್ಪ, ನಿರ್ದೇಶಕರುಗಳಾದ ಬಿ.ಎನ್. ಪ್ರಕಾಶ್, ಗಣೇಶ್ ರೈ, ರಾಜಶೇಖರ್, ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಂಡಿದ್ದರು.