ಶನಿವಾರಸಂತೆ, ಆ.೩೦ ಶಕ್ತಿ ದಿನಪತ್ರಿಕೆಯ ಪತ್ರಿಕಾ ವಿತರಕರಾದ ಕೆ.ಎನ್.ಕುಮಾರಸ್ವಾಮಿ ಅವರು ಸಮೀಪದ ಗಡಿಭಾಗ ಚಂಗಡಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗುರುವಾರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸದಸ್ಯ ಕುಮಾರಸ್ವಾಮಿ ಮತ್ತು ಸದಸ್ಯೆ ಪಾರ್ವತಿ ನಾಮಪತ್ರ ಸಲ್ಲಿಸಿದ್ದರು. ಪಂಚಾಯಿತಿಯ ಒಟ್ಟು ೮ ಮಂದಿ ಸದಸ್ಯರಲ್ಲಿ ಐವರು ಕುಮಾರಸ್ವಾಮಿಯವರಿಗೆ ಮತ ಚಲಾಯಿಸಿದರೆ ಮೂವರು ಪಾರ್ವತಿಯವರಿಗೆ ಮತ ನೀಡಿದರು. ಸಕಲೇಶಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಹುಮತ ಗಳಿಸಿದ ಕುಮಾರಸ್ವಾಮಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ನಿವಾಸಿ ಕುಮಾರಸ್ವಾಮಿಯವರು ೨೦೧೯ ರಲ್ಲಿ ರಾಜಕೀಯ ರಂಗ ಪ್ರವೇಶಿಸಿದರು. ಮಂಜೂರು-ಕಾಮನಳ್ಳಿ ಕ್ಷೇತ್ರದ ಅಭ್ಯರ್ಥಿಯಾಗಿ ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದರು. ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಎರಡೂವರೆ ವರ್ಷ ಸೇವೆ ಸಲ್ಲಿಸಿ, ನಂತರ ೧ ವರ್ಷ ಸದಸ್ಯರಾಗಿದ್ದವರು ಇದೀಗ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕುಮಾರಸ್ವಾಮಿಯವರು ‘ಶಕ್ತಿ’ ಯೊಂದಿಗೆ ಮಾತನಾಡಿ, ಪಂಚಾಯಿತಿ ಅಧ್ಯಕ್ಷನಾಗಿ ನನ್ನ ಮೊದಲ ಆದ್ಯತೆ ಕುಡಿಯುವ ನೀರಿಗೆ, ಎರಡನೇ ಆದ್ಯತೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಗ್ರಾಮ ನೈರ್ಮಲ್ಯ ಕಾಪಾಡುವುದು. ನಂತರ ಸರ್ಕಾರದ ಯೋಜನೆ, ಅನುದಾನಗಳನ್ನು ಫಲಾನುಭವಿಗಳಿಗೆ ಸದ್ಬಳಕೆ ಮಾಡುವುದಾಗಿದೆ. ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಹಾಗೂ ಜೆ.ಜೆ.ಎಂ.ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತೇನೆ ಎಂದರು.