ಮಡಿಕೇರಿ, ಆ. ೩೦: ಜನವಿರೋಧಿ ಸುತ್ತೋಲೆಗಳ ಮೂಲಕ ರಾಜ್ಯ ಸರಕಾರ ಜನರ ಪ್ರಾಣ ಹಿಂಡುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಿಡಿಕಾರಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಜನವಿರೋಧಿ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ರೈತರು ಹಾಗೂ ಸಾಮಾನ್ಯ ವರ್ಗವನ್ನು ಆತಂಕಕ್ಕೆ ದೂಡುವ ಪ್ರಯತ್ನ ಮಾಡುತ್ತಿದೆ. ಸುತ್ತೋಲೆಗಳು ಜಿಲ್ಲೆಗೆ ಮಾರಕವಾಗಿದ್ದು, ಇವುಗಳನ್ನು ಹಿಂಪಡೆಯಬೇಕೆAದು ಒತ್ತಾಯಿಸಿದರು.

ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನಗಳನ್ನು ಹಿಂದಿರುಗಿಸುವ ಸುತ್ತೋಲೆ ಸರಿಯಲ್ಲ. ವನ್ಯಜೀವಿ ಉತ್ಪನ್ನಗಳು ಧಾರ್ಮಿಕ ಆಚರಣೆಯ ಭಾಗವಾಗಿವೆ. ಇವುಗಳನ್ನು ಹಿಂದಿರು ಗಿಸಬೇಕೆಂಬ ಸುತ್ತೋಲೆಯನ್ನು ಹೊರಡಿಸಿ ಭಾವನೆಯನ್ನು ಕೆಣಕುವ ಪ್ರಯತ್ನ ಮಾಡಿದೆ. ಇದರೊಂದಿಗೆ ಖಾಸಗಿ ಜಮೀನಿನಲ್ಲಿರುವ ಮರಗಳ ಮಾಲೀಕತ್ವ ಸರಕಾರಕ್ಕೆ ಸೇರಿಸುವ ನಿಟ್ಟಿನ ಪ್ರಯತ್ನವನ್ನೂ ಸರಕಾರ ಮಾಡಿ ಗಣತಿ ಕಾರ್ಯ ನಡೆಸಿ ರುವುದು ಆಕ್ಷೇಪಾರ್ಹ. ಇದರಿಂದ ಮುಂದಿನ ದಿನಗಳಲ್ಲಿ ತೋಟ ದಲ್ಲಿರುವ ಮರಗಳ ಮಾಲೀಕತ್ವ ಸರಕಾರ ತನ್ನದಾಗಿಸಿ ಕೊಳ್ಳುವ ಆತಂಕ ಇದೆ ಎಂದರು.

ಸಿ ಮತ್ತು ಡಿ ಲ್ಯಾಂಡ್ ಜಾಗವನ್ನು ಮೀಸಲು ಅರಣ್ಯ ಮಾಡಬೇಕೆಂಬ ಪ್ರಸ್ತಾಪ ಸರಿಯಲ್ಲ. ತಲಾತಲಾಂತರಗಳಿAದ ಇಲ್ಲಿನ ಜನರು ಈ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡು, ವ್ಯವಸಾಯ ಮಾಡಿಕೊಂಡು ಜೀವನ ಕಟ್ಟಿ ಕೊಂಡಿದ್ದಾರೆ. ಏಕಾಏಕಿ ಮೀಸಲು ಅರಣ್ಯ ನೆಪದಲ್ಲಿ ಭೂಮಿಯನ್ನು ವಶಪಡಿಸಿಕೊಳ್ಳುವ ಕ್ರಮ ಸರಕಾರದ ಜನವಿರೋಧಿ ನೀತಿಗೆ ಕನ್ನಡಿಯಾಗಿದೆ ಎಂದು ಟೀಕಿಸಿದ ಅವರು, ಈ ಕ್ರಮ ವಿರೋಧಿಸಿ ಸೋಮವಾರಪೇಟೆಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಮನವಿಯನ್ನು ಶಾಸಕರು ಸ್ವೀಕರಿಸಿದ್ದಾರೆ. ಶಾಸಕರು ತೊಟ್ಟಿಲನ್ನು ತೂಗಿ, ಮಗುವನ್ನು ಚಿವುಟುವ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸರಕಾರದ ಗಮನ ಸೆಳೆದು ಈ ಸುತ್ತೋಲೆಗಳನ್ನು ಹಿಂಪಡೆಯುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಈ ಹಿಂದೆ ೨.೫೮ ಲಕ್ಷ ಹೆಕ್ಟೇರ್ ಸಿ-ಡಿ ಲ್ಯಾಂಡ್ ಅನ್ನು ನಮ್ಮ ಸರಕಾರ ಹಿಂಪಡೆದುಕೊAಡಿದೆ. ಆದರೆ, ಈ ಸರಕಾರ ಅರಣ್ಯ ಪ್ರದೇಶ ಮಾಡಬೇಕೆಂಬ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿ ಕಿರುಕುಳ ನೀಡುತ್ತಿದೆ. ರಾಜ್ಯದಲ್ಲಿ ಶೇ ೩೦ ಅರಣ್ಯ ಇರಬೇಕೆಂಬ ನಿಯಮವಿದೆ. ಕೊಡಗು ಜಿಲ್ಲೆಯಲ್ಲಿ ಶೇ ೩೫ರಷ್ಟು ಅರಣ್ಯವಿದ್ದು, ಬೇರೆ ಜಿಲ್ಲೆಗಳಲ್ಲಿ ಅರಣ್ಯೀಕರಣ ಮಾಡಲಿ. ಪರಿಸರ ಉಳಿವಿನಲ್ಲಿ ಕೊಡಗಿನ ಪಾತ್ರ ದೊಡ್ಡದಿದೆ ಎಂದರು.

ಸೆ. ೧ ರಿಂದ ಸದಸ್ಯತ್ವ ಅಭಿಯಾನ

ಸೆ. ೧ ರಿಂದ ವಿಶ್ವ ವ್ಯಾಪಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾಹಿತಿ ನೀಡಿದರು.

ಬಿಜೆಪಿ ಪ್ರಪಂಚದ ಅತೀ ದೊಡ್ಡ ರಾಜಕೀಯ ಪಕ್ಷವಾಗಿದ್ದು, ೧೮ ಕೋಟಿ ಸದಸ್ಯರನ್ನು ಹೊಂದಿದೆ. ಈ ಬಾರಿ ಶೇ ೩೦ ರಿಂದ ೪೦ ಹೆಚ್ಚಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಪಕ್ಷ ಸದೃಢವಾಗಿದ್ದು, ೬೦ ಸಾವಿರ ಸದಸ್ಯರಿದ್ದಾರೆ. ಈ ಬಾರಿ ಒಟ್ಟು ೧.೨೦ ಲಕ್ಷ ಸದಸ್ಯರನ್ನು ಸೇರ್ಪಡೆ ಮಾಡಬೇಕೆಂಬ ಗುರಿ ಇದೆ. ಸಕ್ರಿಯ ಸದಸ್ಯರು ಕನಿಷ್ಟ ೩ ಸದಸ್ಯರನ್ನು ನೇಮಿಸಬೇಕಾಗಿದೆ. ೮೮೦೦೦೦೨೦೨೪ ಸಂಖ್ಯೆಗೆ ಮಿಸ್ ಕಾಲ್ ನೀಡುವುದರೊಂದಿಗೆ ಸದಸ್ಯತ್ವ ಪಡೆಯಲು ಅವಕಾಶವಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರರುಗಳಾದ ಬಿ.ಕೆ. ಅರುಣ್ ಕುಮಾರ್, ತಳೂರು ಕಿಶೋರ್ ಕುಮಾರ್ ಹಾಜರಿದ್ದರು.