ಕುಶಾಲನಗರ, ಆ. ೩೦ : ಪ್ರತಿಯೊಬ್ಬರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಶಿಕ್ಷಣ ವನ್ನು ಕಡ್ಡಾಯವಾಗಿ ನೀಡುವುದು ಪೋಷಕರ ಪ್ರಮುಖ ಜವಾಬ್ದಾರಿ ಎಂದು ಸಮಸ್ತ ಕೇರಳ ಕೇಂದ್ರ ಮುಶಾವರ ಸಮಿತಿಯ ಸದಸ್ಯರಾದ ಎಂ ಅಬ್ದುಲ್ಲಾ ಫೈಝಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಶಾಲನಗರದ ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರದಾನ ಸಮ್ಮೇಳನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಕ್ಷಣ ನೀಡುವ ಮೂಲಕ ಯುವ ಪೀಳಿಗೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಪೋಷಕರು ಲೋಪದೋಷ ಮಾಡಬಾರದು. ಪೋಷಕರು ತಪ್ಪು ಮಾಡಿದ್ದಲ್ಲಿ ಇಡೀ ಸಮಾಜವೇ ಏರುಪೇರು ಆಗುವ ಸಾಧ್ಯತೆ ಇರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದಾರುಲ್ ಉಲೂಂ ಮದರಸ ಮತ್ತು ಫಾಳಿಲಾ ಮಹಿಳಾ ಕಾಲೇಜು ಪ್ರಾಂಶುಪಾಲ ಎಂ. ತಮ್ಲೀಕ್ ದಾರಿಮಿ, ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆದಲ್ಲಿ ಇಡೀ ಕುಟುಂಬದ ಅಭಿವೃದ್ಧಿ ಮತ್ತು ಏಳಿಗೆ ಸಾಧ್ಯ. ಶಿಕ್ಷಣದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಸಾಧ್ಯ ಎಂದು ಹೇಳಿದರು.

ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್ ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಸಂಗಮ ಕಾರ್ಯಾಗಾರ ನಡೆಯಿತು. ಹಿಲಾಲ್ ಮಸೀದಿಯ ಧರ್ಮಗುರುಗಳಾದ ನಾಸಿರ್ ಫೈಝಿ ಅವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಧರ್ಮ ಗುರುಗಳಿಂದ ಧಾರ್ಮಿಕ ಪಾರಾಯಣ ನಡೆಯಿತು. ೨೨ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲಾಯಿತು.

ಹಿಲಾಲ್ ಮಸೀದಿ ಕಾರ್ಯದರ್ಶಿಗಳು ಹಾಗೂ ದಾರುಲ್ ಉಲೂಂ ಮದರಸ ಮತ್ತು ಕಾಲೇಜಿನ ಪ್ರಮುಖ ಅಬ್ದುಲ್ ಮಜೀದ್ ಮಾತನಾಡಿದರು. ಹಿಲಾಲ್ ಮಸೀದಿ ಮತ್ತು ಮದರಸ ಹಾಗೂ ಕಾಲೇಜಿನ ಅಧ್ಯಕ್ಷ ಎಂಎAಎಸ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೀಫ್ ಫೈಝಿ ಅವರು ಸಂದೇಶ ನುಡಿಗಳನ್ನಾಡಿದರು. ಹಿಲಾಲ್ ಮಸೀದಿ ಮತ್ತು ಮದರಸ ಉಪಾಧ್ಯಕ್ಷ ಹಂಸ ಹಾಜಿ, ಶನಿವಾರಸಂತೆ ಧರ್ಮಗುರು ಸೂಫಿ ದಾರಿಮಿ, ಪ್ರಮುಖರಾದ ಬಿ. ರಫೀಕ್, ಮಾಜಿ ಅಧ್ಯಕ್ಷರಾದ ಬಿ.ಎಚ್. ಅಹಮದ್ ಹಾಜಿ, ಎ.ಎ. ಸಲೀಂ, ಉನೈಸ್ ಫೈಝಿ , ರಾಝಿಖ್ ರೆಹ್ಮನಿ, ಮತ್ತು ಮದರಸ ಹಾಗೂ ಮಸೀದಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು, ವಿದ್ಯಾರ್ಥಿಗಳ ಪೋಷಕರು ಇದ್ದರು.