ಸುಂಟಿಕೊಪ್ಪ, ಆ. ೩೦ : ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯು ಒಂದೇ ಆವರಣದಲ್ಲಿದ್ದು, ಶಾಲೆಗೆ ಒಳಾಂಗಣ ಸಭಾಂಗಣವಿಲ್ಲದೆ ಪಠ್ಯೇತರ ಚಟುವಟಿಕೆಗಳನ್ನು ಖಾಸಗಿ ಶಾಲೆಗಳ ಸಭಾಂಗಣ ಅಥವಾ ಖಾಸಗಿ ಸಭಾಂಗಣಗಳಲ್ಲಿ ಆಯೋಜಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

ಸುAಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಲದಲ್ಲಿ ಕೊಡಗರಹಳ್ಳಿ, ಕಂಬಿಬಾಣೆ, ನಾಕೂರು-ಶಿರಂಗಾಲ, ಹೇರೂರು, ೭ನೇ ಹೊಸಕೋಟೆ, ಗರಗಂದೂರು, ಮಾದಾಪುರ, ಚೆಟ್ಟಳ್ಳಿ, ಭೂತನಕಾಡು, ಕೆದಕಲ್, ಹೊರೂರು, ಹಾಲೇರಿ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಮಕ್ಕಳು ಉತ್ತಮ ಸಾಧನೆಗೈದಿದ್ದರೂ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಸುಸಜ್ಜಿತವಾದ ಸಭಾಂಗಣ ಇಲ್ಲದಿರುವುದು ಶತಮಾನದ ಇತಿಹಾಸ ಹೊಂದಿರುವ ಶಾಲೆಗೆ ಕಪ್ಪುಚುಕ್ಕಿಯಾಗಿದೆ.

ಶಾಲಾ ಆವರಣದಲ್ಲಿ ೨೦೧೯-೨೦ ರಲ್ಲಿ ಹೆಚ್ಚುವರಿ ಕೊಠಡಿಯನ್ನು ಸೇರಿದಂತೆ ಸಭಾಂಗಣ ನಿರ್ಮಿಸಲು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಭೂಮಿಪೂಜೆ ನೇರವೇರಿಸಲಾಗಿತ್ತು. ನಂತರದ ದಿನಗಳಲ್ಲಿ ಅಡಿಪಾಯಕ್ಕೆ ಅಳವಡಿಸಲಾಗಿರುವ ಕಲ್ಲು, ನಿಲುವು ಗಂಬಗಳಿಗೆ ಅಳವಡಿಸಲಾಗಿರುವ ಕಬ್ಬಿಣಗಳು ಹಾಗೇ ಉಳಿದಿದ್ದು, ಮಕ್ಕಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದೆ. ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಲೆAದು ಪೋಷಕರು ಆಗ್ರಹಿಸಿದ್ದಾರೆ. ಶಾಲೆಯಲ್ಲಿ ಎಲ್‌ಕೆಜಿಯಿಂದ ೭ನೇ ತರಗತಿಯವರೆಗೆ ಒಟ್ಟು ೨೧೦ ಮಕ್ಕಳು ಹಾಗೂ ಪ್ರೌಢಶಾಲೆಯಲ್ಲಿ ಅಂದಾಜು ೧೩೦ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮಕ್ಕಳ ಅನುಗುಣಕ್ಕೆ ಹೊಂದಿಕೊAಡAತೆ ತರಗತಿಗಳ ಕೊರತೆ ಒಂದೆಡೆಯಾದರೆ, ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸಲು ಒಳಾಂಗಣ ಸಭಾಂಗಣ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ.

ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯು ಶತಮಾನ ಕಂಡ ಶಾಲೆಯಾಗಿದೆ. ಪಠ್ಯ ಸೇರಿದಂತೆ ಪಠ್ಯೇತ್ತರ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತರಬೇತಿ ಪಡೆದ ಅದೆಷ್ಟೋ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಸಾಧನೆ ತೋರಿರುವುದು ಈ ಶಾಲೆಯ ಮತ್ತೊಂದು ಗರಿಮೆ.

ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲಾವರಣದಲ್ಲಿ ಒಳಾಂಗಣ ಸಭಾಂಗಣ ಕಾರ್ಯಾಚರಿಸುತ್ತಿತ್ತು. ಅದು ಕ್ರಮೇಣ ಶಿಥಿಲಾವಸ್ಥೆಯಲ್ಲಿರುವುದನ್ನು ಮನಗಂಡ ಹಿಂದಿನ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರು ಅದನ್ನು ಕೆಡವಿ ಅದೇ ಜಾಗದಲ್ಲಿ ೨೦೧೯-೨೦ ರಲ್ಲಿ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಜಿ.ಪಂ. ಅವರ ಸಹಕಾರದಿಂದ ರೂ. ೪ ಲಕ್ಷ ಹಾಗೂ ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ ಅವರ ಶ್ರಮದಿಂದ ತಾ.ಪಂ.ನಿAದ ರೂ. ೩.೬೮ ಲಕ್ಷ ಅನುದಾನ ಬಿಡುಗಡೆಗೊಳಿಸಿ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಮಾರ್ಚ್ ಸಂದರ್ಭದಲ್ಲಿ ಕೋವಿಡ್‌ನಿಂದಾಗಿ ಕಾಮಗಾರಿಗೆ ಮೀಸರಿಲಿಸಿದ್ದ ಅನುದಾನವನ್ನು ಸರಕಾರದ ಅಧಿಸೂಚನೆ ಮೇರೆಗೆ ಹಿಂಪಡೆದು ಕೊಳ್ಳಲಾಗಿತ್ತು. ಅನುದಾನವಿಲ್ಲದೆ ಕಾಮಗಾರಿಯು ಸ್ಥಗಿತಗೊಂಡಿದೆ.

ಪೋಷಕರು ಮನೆಯಿಂದ ಕೂಲಿ ಕೆಲಸಕ್ಕೆ ತೆರಳುತ್ತಿದ್ದಂತೆ ಬೇಗನೆ ಶಾಲೆಗೆ ಆಗಮಿಸುವ ಮಕ್ಕಳು ಶಿಕ್ಷಕರು ಬರುವುದಕ್ಕೂ ಮುನ್ನ ಅಪೂರ್ಣ ಕಾಮಗಾರಿಯಿಂದಾಗಿ ನಿಲುವು ಗಂಬಗಳ ಕಬ್ಬಿಣದಲ್ಲಿ ಆಟವಾಡುವಾಗ ಗಾಯಗಳಾಗುವ ಸಂಭವ ಹೆಚ್ಚಿದೆ.

-ರಾಜು ರೈ