ಸೋಮವಾರಪೇಟೆ, ಆ. ೩೧: ನೆರೆಯ ಕೇರಳದಿಂದ ಹೊಟ್ಟೆಪಾಡಿಗಾಗಿ ಕೊಡಗಿನ ಕುಶಾಲನಗರಕ್ಕೆ ಬಂದಿದ್ದ ವ್ಯಕ್ತಿಯೋರ್ವರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆ ಸ್ಥಳೀಯರೇ ಸಂಬAಧಿಕರಾಗಿ ಅಂತ್ಯಕ್ರಿಯೆ ನಡೆಸಿದ ಅಪರೂಪದ ಘಟನೆ ಕುಶಾಲನಗರದ ಸುಂದರನಗರದಲ್ಲಿ ನಡೆದಿದೆ.

ಪುತ್ರ ಮೃತಪಟ್ಟ ವಿಷಯವನ್ನು ಕೇರಳದಲ್ಲಿರುವ ತಾಯಿಗೆ ತಿಳಿಸಿದ ಸಂದರ್ಭ, ಅಲ್ಲಿನ ಕಷ್ಟಗಳನ್ನು ಹೇಳಿಕೊಂಡ ಅಮ್ಮ, ಅಂತ್ಯಕ್ರಿಯೆ ನೆರವೇರಿಸಲೂ ಅಸಾಧ್ಯವಾದ ಸಂಕಟವನ್ನು ಬಿಚ್ಚಿಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಹಿಂದೂ ಮಲಯಾಳಿ ಸಮಾಜದವರೇ ಮೃತ ವ್ಯಕ್ತಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಮಾನವೀಯತೆ ಮೆರೆದಿದ್ದಾರೆ. ಕೇರಳ ರಾಜ್ಯದಿಂದ ಕೆಲಸ ಅರಸಿ ಕಳೆದ ೪ ವರ್ಷಗಳ ಹಿಂದೆ ಕುಶಾಲನಗರದ ಸುಂದರ ನಗರಕ್ಕೆ ಆಗಮಿಸಿದ್ದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಗ್ರಾಮದ ದಿ. ಗೋಪಿ ಪಿಳ್ಳೈ ಹಾಗೂ ಭವಾನಿ ಅವರ ಪುತ್ರ ರತೀಶ್ ಕುಮಾರ್ (೪೨) ಎಂಬವರು ಬಾಡಿಗೆ ಕೊಠಡಿಯೊಂದರಲ್ಲಿ ನೆಲೆಸಿದ್ದರು. ಈ ನಡುವೆ ಜಾಂಡೀಸ್ ಖಾಯಿಲೆಗೆ ಒಳಗಾಗಿದ್ದ ಇವರು, ಕುಶಾಲನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರು.

ಒಬ್ಬಂಟಿಯಾಗಿ ವಾಸವಿದ್ದ ರತೀಶ್ ಅವರ ಮೃತ ದೇಹವನ್ನು ಪೊಲೀಸರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಹಿಂದೂ ಮಲಯಾಳಿ ಸಮಾಜದ ನೆರವಿನೊಂದಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಕೇರಳದ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಗೆ ತಲುಪಿಸಲು ಸಿದ್ಧತೆ ನಡೆಸಿತ್ತು.

ಆದರೆ ಮೃತನ ತಾಯಿ ತನ್ನ ಮನೆಯ ಸಂಕಷ್ಟವನ್ನು ದೂರವಾಣಿ ಮೂಲಕ ವಿವರಿಸಿ, ತನಗೆ ೮೫ ವರ್ಷ ವಯಸ್ಸಾಗಿದ್ದು, ರತೀಶ್ ಅವರ ಸಹೋದರಿಯೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಆಕೆಯ ಪತಿಯೂ ದೂರದೂರಿನಲ್ಲಿದ್ದಾರೆ. ಹಣಕಾಸು ಇಲ್ಲದೇ ತೀರಾ ಕಷ್ಟದಲ್ಲಿದ್ದೇವೆ. ಮಗನ ಅಂತ್ಯಕ್ರಿಯೆ ನಡೆಸಲೂ ಸಹ ನಮ್ಮಲ್ಲಿ ಹಣವಿಲ್ಲ. ನೀವೇ ಮುಕ್ತಿ ನೀಡಿ ಎಂದು ಕಣ್ಣೀರಾಕಿದ್ದಾರೆ.

ನಂತರ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕ ಸಾಧಿಸಿ, ಮೃತರ ಮನೆಯವರಿಂದ ಒಪ್ಪಿಗೆ ಪತ್ರವನ್ನು ಇ-ಮೇಲ್ ಮೂಲಕ ಪಡೆದುಕೊಂಡು, ಸುಂದರನಗರದ ಹಿಂದೂ ರುದ್ರಭೂಮಿಯಲ್ಲಿ ಮಲಯಾಳಿ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಿ ಇದನ್ನು ಪೊಲೀಸರ ಸಹಕಾರದಿಂದ ವೀಡಿಯೋ ಕಾಲ್ ಮೂಲಕ ಕೇರಳದಲ್ಲಿರುವ ತಾಯಿ ಹಾಗೂ ಸಹೋದರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಸಂಬAಧಿಕರಿದ್ದರೂ ಅನಾಥವಾಗಿದ್ದ ರತೀಶ್ ಅವರ ಅಂತ್ಯಕ್ರಿಯೆಯನ್ನು ಸೋಮವಾರಪೇಟೆ ತಾಲೂಕು ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ್, ಉಪಾಧ್ಯಕ್ಷ ಎನ್. ಆರ್. ಅಜೀಶ್ ಕುಮಾರ್, ನಿರ್ದೇಶಕರಾದ ಕಿಶೋರ್, ಸತೀಶ್, ಸಂದೀಪ್ ಮತ್ತು ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ರವೀಂದ್ರನ್, ನಿರ್ದೇಶಕರಾದ ಕೆ. ವರದನ್, ಸನ್ನಿಧಿ, ರಂಜಿತ್, ಶ್ರೀ ಮುತ್ತಪ್ಪ ದೇವಾಲಯ ಟ್ರಸ್ಟ್ನ ಕಾರ್ಯದರ್ಶಿ ಪವನ್, ಚಂದ್ರು, ರಾಜೀವನ್, ಸುಂದರ ನಗರದ ನಿವಾಸಿಗಳಾದ ಕುಂಟಾನಿ ರಾಜು, ಮುರುಗನ್, ಶಶಿ, ತಂಬಿ ಮತ್ತು ಗ್ರಾಮಸ್ಥರು ನೆರವೇರಿಸಿದರು.