ಮಡಿಕೇರಿ, ಆ. ೩೧: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಸಂಬAಧ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಅವರು ಮಡಿಕೇರಿ, ಕುಶಾಲನಗರ ಸೇರಿದಂತೆ ವಿವಿಧ ಕಡೆಗಳ ಹೊಟೇಲ್‌ಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ತಮ್ಮ ಆರೋಗ್ಯವು ಸಹ ಉತ್ತಮವಾಗಿರಬೇಕು ಎಂದು ಅನಿಲ್ ಧಾವನ್ ನಿರ್ದೇಶನ ನೀಡಿದರು. ಆಹಾರ ಪದಾರ್ಥಗಳ ತಯಾರಕರು, ಮಾರಾಟಗಾರರು, ದಾಸ್ತಾನುದಾರರು ಶುಚಿತ್ವಕ್ಕೆ ಒತ್ತು ನೀಡಬೇಕು. ಗ್ರಾಹಕರಿಗೆ ಶುದ್ಧವಾದ ಆಹಾರವನ್ನು ಪೂರೈಸಬೇಕು ಎಂದು ಸೂಚಿಸಿದರು.

ಆಹಾರಕ್ಕೆ ಕೃತಕ ಬಣ್ಣಗಳನ್ನು ಬಳಸಬಾರದು. ಮೊಟ್ಟೆ, ಮೀನು, ಮಾಂಸದ ಪದಾರ್ಥಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಬಳಕೆ ಮಾಡುವಂತಾಗಬೇಕು ಎಂದು ತಿಳಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಆಯುಕ್ತಾಲಯ ಸೂಚನೆಯಂತೆ ಎರಡು ದಿನಗಳ ಕಾಲ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.