ಗೋಣಿಕೊಪ್ಪಲು, ಆ. ೩೧ : ಅಸ್ಸಾಂ ಸೇರಿದಂತೆ ಹೊರ ರಾಜ್ಯದಿಂದ ಕೊಡಗು ಜಿಲ್ಲೆಗೆ ಕಾರ್ಮಿಕರಾಗಿ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹಲವು ಅಹಿತಕರ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಕೆ. ರಾಮರಾಜನ್ ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ಹಾಗೂ ಇತರೆಡೆಯಲ್ಲಿ ವಲಸಿಗರಾಗಿ ಆಗಮಿಸಿರುವ ಕಾರ್ಮಿಕರ ದಾಖಲೆಗಳನ್ನು ಕಡ್ಡಾಯವಾಗಿ ಸಂಬAಧಿಸಿದ ಮಾಲೀಕರು ಸಂಗ್ರಹಿಸಿಡಬೇಕು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಅಗತ್ಯ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲೀರ ಬೋಪಣ್ಣ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರನ್ನು ಹಾಗೂ ರೈತರನ್ನು ವಿಶ್ವಾಸಕ್ಕೆ ಪಡೆಯುವ ಮೂಲಕ ಅವರ ತೋಟದಲ್ಲಿರುವ ಕಾರ್ಮಿಕರ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಸಭೆಯನ್ನು ಆಯೋಜಿಸಿ ದಾಖಲೆಗಳ ಸಂಗ್ರಹಕ್ಕೆ ಮುಂದಾದರು. ಪಂಚಾಯಿತಿಯಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಹೊರರಾಜ್ಯದ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲರ ದಾಖಲೆಗಳು ಪೊಲೀಸ್ ಇಲಾಖೆಯಲ್ಲಿ

(ಮೊದಲ ಪುಟದಿಂದ) ಹಾಗೂ ಪಂಚಾಯಿಯಲ್ಲಿ ಸಂಗ್ರಹಿಸಿಡಲಾಗುತ್ತಿದೆ. ಯಾರೂ ಕೂಡ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳಬಾರದು. ತಾವು ನೆಲೆಸಿರುವ ಲೈನ್ ಮನೆಗಳಲ್ಲಿ ಸಂಬAಧಿಕರ ನೆಪದಲ್ಲಿ ಬರುವ ಕಾರ್ಮಿಕರ ಬಗ್ಗೆಯೂ ಮಾಹಿತಿಯನ್ನು ತೋಟದ ಮಾಲೀಕರಿಗೆ ಆಗಿಂದಾಗ್ಗೆ ನೀಡಬೇಕು. ಮಾಲೀಕರೊಂದಿಗೆ ಉತ್ತಮ ಸೌಹಾರ್ಧತೆ ಕಾಪಾಡಿಕೊಳ್ಳಬೇಕು. ಕೂಲಿಯ ವಿಚಾರದಲ್ಲಿ ಮಾಲೀಕರೊಂದಿಗೆ ಮುಂಗಡ ಹಣ ಪಡೆದು ನಂತರ ಕರ್ತವ್ಯ ನಿರ್ವಹಿಸದೆ ಮಾಲೀಕರೊಂದಿಗೆ ಜಗಳವಾಡಿಕೊಂಡು ತೆರಳುವಂತಾಗ ಬಾರದು ಎಂದರು.

ಮಾಲೀಕರು ಕೂಡ ಕಾರ್ಮಿಕರಿಗೆ ನಿಗದಿಪಡಿಸಿದ ದಿನಗೂಲಿಯನ್ನು ಕೊಟ್ಟ ಮಾತಿನಂತೆಯೇ ನೀಡಬೇಕು. ಆರಂಭದಲ್ಲಿಯೇ ಈ ಬಗ್ಗೆ ಕಾರ್ಮಿಕರು ಹಾಗೂ ಮಾಲೀಕರು ಒಪ್ಪಂದ ಮಾಡಿಕೊಳ್ಳಬೇಕು, ಇದರಿಂದ ಇಬ್ಬರ ನಡುವೆ ಎಂದಿಗೂ ಸಮಸ್ಯೆ ಎದುರಾಗುವುದಿಲ್ಲ. ನಕಲಿ ದಾಖಲೆ ನೀಡಿ ಮಾಲೀಕರನ್ನು ವಂಚಿಸಬಾರದು ಎಂದು ವಲಸಿಗ ಕಾರ್ಮಿಕರಿಗೆ ಕೊಲ್ಲೀರ ಬೋಪಣ್ಣ ಸೂಚನೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ತೋಟದ ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರದೀಪ್ ಕುಮಾರ್, ಇತ್ತೀಚಿನ ದಿನಗಳಲ್ಲಿ ಹೊರ ರಾಜ್ಯದಿಂದ ವಲಸೆ ಬರುವ ಕಾರ್ಮಿಕರು ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಹಣದ ಆಸೆಗಾಗಿ ಕಳ್ಳತನ, ದರೋಡೆ, ಮಾಲೀಕರ ಮೇಲೆ ಹಲ್ಲೆ, ಸೇರಿದಂತೆ ವಿವಿಧ ರೀತಿಯ ಅಪರಾಧಗಳನ್ನು ಎಸಗಿ ರಾತೋರಾತ್ರಿ ಊರನ್ನು ತೊರೆದು ತಮ್ಮ ರಾಜ್ಯಕ್ಕೆ ತೆರಳುತ್ತಿದ್ದಾರೆ. ಇದರಿಂದ ಅಪರಾಧ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಸ್ಥಳೀಯ ಮಟ್ಟದಲ್ಲಿ ವಲಸಿಗ ಕಾರ್ಮಿಕರ ಮಾಹಿತಿ ಹಾಗೂ ದಾಖಲೆಗಳನ್ನು ಸಂಗ್ರಹಿಸುವ ಕೆಲಸ ಆರಂಭಿಸಲಾಗಿದೆ. ಬಿ.ಶೆಟ್ಟಿಗೇರಿ ಪಂಚಾಯಿತಿಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ದಾಖಲೆ ಸಂಗ್ರಹಿಸುವ ಕಾರ್ಯ ನಡೆದಿರುವುದು ಶ್ಲಾಘನೀಯ. ಇದರಿಂದ ಪೊಲೀಸ್ ಇಲಾಖೆಗೆ ಅನುಕೂಲವಾಗಿದೆ ಎಂದರು. ಪಂಚಾಯಿತಿ ಮಟ್ಟದಲ್ಲಿಯೂ ಪ್ರತಿ ತೋಟದ ಮಾಲೀಕರ ಬಳಿ ಕಾರ್ಮಿಕರ ವಿವರಗಳು ಲಭ್ಯವಾಗಲಿದೆ. ದಾಖಲೆ ಇಲ್ಲದ ಹೊರರಾಜ್ಯದ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೆಲಸಕ್ಕಾಗಿ ನೇಮಿಸಿಕೊಳ್ಳಬಾರದು ಎಂದು ಅವರು ಬೆಳೆಗಾರರಿಗೆ ಸೂಚನೆ ನೀಡಿದರು.

ಮುಂಜಾನೆ ೯ ಗಂಟೆಯಿAದಲೇ ತೋಟದ ಮಾಲೀಕರು ತಮ್ಮಲ್ಲಿರುವ ಕಾರ್ಮಿಕರನ್ನು ಪಂಚಾಯಿತಿಗೆ ಕರೆತರುವ ಮೂಲಕ ಅವರ ಅಗತ್ಯ ದಾಖಲಾತಿಗಳನ್ನು ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳಿಗೆ ನೀಡುವ ಮೂಲಕ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಕಾರ್ಮಿಕರೊಂದಿಗೆ ಅವರ ಮಕ್ಕಳು ಸೇರಿದಂತೆ ಕುಟುಂಬ ಸದಸ್ಯರ ಮಾಹಿತಿಯನ್ನು ಕೂಡ ಪಡೆಯಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾವೇರಮ್ಮ, ಪಿಡಿಓ ಪರಮೇಶ್ವರ್ ಸೇರಿದಂತೆ ಗ್ರಾಮದ ಮುಖಂಡರಾದ ತೀತಿಮಾಡ ಸದನ್, ನಾಮೇರ ರಾಜ, ನಾಮೇರ ದೀಪ, ಕಳ್ಳಿಚಂಡ ದೀಪಕ್, ನಿವೃತ್ತ ಸೈನಿಕರಾದ ಕೊಲ್ಲೀರ ಆರ್. ಬೋಪಣ್ಣ, ಕಾಳೇಂಗಡ ಅಯ್ಯಪ್ಪ, ಅಣ್ಣೀರ ಸತೀಶ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ವಲಸಿಗ ಕಾರ್ಮಿಕರಿಗೆ ಸಭೆಯ ಬಗ್ಗೆ ಹಿಂದಿ ಭಾಷೆಯಲ್ಲಿಯೇ ವಿವರಣೆ ನೀಡಲಾಯಿತು. ದಾಖಲೆಗಳನ್ನು ಯಾವ ಉದ್ದೇಶಕ್ಕೆ ಪಡೆಯಲಾಗುತ್ತಿದೆ ಎಂದು ಕಾರ್ಮಿಕರಿಗೆ ನಿವೃತ್ತ ಸೈನಿಕ ಕೊಲ್ಲೀರ ಆರ್. ಬೋಪಣ್ಣ ವಿವರಿಸಿದರು.

-ಹೆಚ್.ಕೆ. ಜಗದೀಶ್