ಕಣಿವೆ, ಆ. ೩೧: ಗದ್ದೆಯಲ್ಲಿ ಮೇಯುತ್ತಿದ್ದ ಏಳು ತಿಂಗಳ ಗರ್ಭ ಧರಿಸಿದ್ದ ಹಸುವಿನ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಸುಂಟಿಕೊಪ್ಪ ಹೋಬಳಿಯ ಹೊರೂರು ಮಠ ಎಂಬಲ್ಲಿ ಶನಿವಾರ ನಡೆದಿದೆ.

ಭೂತನಕಾಡು ಕಡೆಯಿಂದ ಹೊರೂರು ಮಠದ ಗ್ರೀನ್ ಲ್ಯಾಂಡ್ ಎಸ್ಟೇಟ್ ಬಳಿ ಧಾವಿಸಿದ ಕಾಡಾನೆ ಅಲ್ಲಿನ ದೇವಿಪ್ರಸಾದ್ ಎಂಬವರಿಗೆ ಸೇರಿದ ಹಸು ಗದ್ದೆಯಲ್ಲಿ ಮೇಯುತ್ತಿದ್ದಾಗ ದಾಳಿ ನಡೆಸಿದೆ.

ಕೋರೆಯಿಂದ ಚುಚ್ಚಿದ ಪರಿಣಾಮ ಗರ್ಭ ಧರಿಸಿದ ಹಸುವಿನ ಕೆಳ ಹೊಟ್ಟೆಯ ಭಾಗಕ್ಕೆ ಹಾನಿಯಾಗಿದ್ದು, ತೀವ್ರ ರಕ್ತ ಸ್ರಾವವಾಗಿದೆ. ತಕ್ಷಣವೇ ಸಂಚಾರಿ ಪಶು ಚಿಕಿತ್ಸಾ ಘಟಕಕ್ಕೆ ಕರೆ ಮಾಡಿದರೂ, ಸಂಬAಧಿಸಿದವರು ಸ್ಥಳಕ್ಕೆ ತಡವಾಗಿ ಬಂದರು ಎಂದು ದೇವಿಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಕಾಡಾನೆ ಹಾವಳಿ ತಡೆಗೆ ಸೂಕ್ತ ಸೋಲಾರ್ ಅಥವಾ ರೈಲ್ವೆ ಕಂಬಿಗಳನ್ನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಕೆ.ಎಸ್.ಮೂರ್ತಿ